ಲಸಿಕೆ- ಶ್ವೇತಪತ್ರ ಹೊರಡಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು,ಮೇ ೨೦- ರಾಜ್ಯದಲ್ಲಿ ಲಸಿಕೆ ಲಭ್ಯತೆ ಕುರಿತಂತೆ ಸತ್ಯವನ್ನು ಮರೆ ಮಾಚಬೇಡಿ, ಈ ಸಂಬಂಧ ರಾಜ್ಯಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ರಾಜ್ಯ ಉಚ್ಛ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.
ಅಗತ್ಯ ಪ್ರಮಾಣದ ಲಸಿಕೆ ಲಭ್ಯತೆ ಇಲ್ಲದಿದ್ದರೂ ಲಸಿಕೆ ಅಭಿಯಾನ ಆರಂಭಿಸಿದ್ದ ಏಕೆ ಎಂದು ಈ ಹಿಂದೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಹೈಕೋರ್ಟ್, ಇಂದೂ ಸಹ ಲಸಿಕೆ ಲಭ್ಯತೆ ಕುರಿತಂತೆ ಜನರಿಗೆ ಸರಿಯಾದ ಮಾಹಿತಿ ನೀಡಿ, ಜನರಲ್ಲಿ ಹುಸಿ ನಂಬಿಕೆ ಹುಟ್ಟಿಸಬೇಡಿ ಎಂದು ಎಚ್ಚರಿಸಿದೆ.
ಎರಡನೇ ಡೋಸ್ ಲಸಿಕೆ ಕೊರತೆ ಕುರಿತಂತೆ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಜನರ ಮುಂದೆ ಸತ್ಯಾಂಶ ತಿಳಿಸಿದರೆ ಲಸಿಕೆ ಪಡೆಯುವವರಿಗೆ ಸರಿಯಾದ ಮಾಹಿತಿ ನೀಡಿದಂತಾಗುತ್ತದೆ. ಜನರು ಎಚ್ಚೆತ್ತುಕೊಳ್ಳಲೂ ಸಹ ಈ ಮಾಹಿತಿ ಸಹಕಾರಿಯಾಗಲಿದೆ. ಲಸಿಕೆ ಕುರಿತಂತೆ ರಾಜ್ಯಸರ್ಕಾರ ಸರಿಯಾದ ನೀತಿ ರೂಪಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.