ಲಸಿಕೆ ವಿತರಣೆ: ಸಂಜೆ ಸಿಎಂಗಳೊಂದಿಗೆ ಪಿಎಂ ಸಂವಾದ

ನವದೆಹಲಿ, ಜ. ೧೧- ದೇಶದಲ್ಲಿ ಈ ತಿಂಗಳ ೧೬ರಿಂದ ಕೊರೋನಾ ಸೋಂಕಿಗೆ ತುರ್ತು ಲಸಿಕೆ ಹಾಕುವ ಅಭಿಯಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಜೊತೆ ಸಂವಾದ ನಡೆಸಲಿದ್ದಾರೆ.

ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಅದರ ಸಿದ್ದತೆ ,ಕೊರೋನಾ ಸೋಂಕಿನ ವಿರುದ್ಧದ ಹೋರಾಟ ಯಾವ ರೀತಿ ಮಾಡಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸುವ ಸಾದ್ಯತೆಗಳಿವೆ.

ಸಂಜೆ ನಾಲ್ಕು ಗಂಟೆಯಿಂದ ಆರಂಭವಾಗಲಿರುವ ಸಭೆಯಲ್ಲಿ ಕೋವಿಡ್ ಲಸಿಕೆ ಯಾವ ಪ್ರಮಾಣದಲ್ಲಿ ನೀಡಬೇಕು ಎನ್ನುವುದು ಸೇರಿದಂತೆ ರಾಜ್ಯಗಳಲ್ಲಿ ವಿತರಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ ಎನ್ನುವ ಕುರಿತು ಮಾಹಿತಿ ಪಡೆಯುವ ಸಾದ್ಯತೆ ಇದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ “ಕೊವಾಕ್ಸಿನ್ ” ಹಾಗೂ ಆಸ್ಟ್ರಾಝೆನಕ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಹಕಾರದೊಂದಿಗೆ ಭಾರತೀಯ ಸೆರಂ ಸಂಸ್ಥೆ ಉತ್ಪಾದಿಸುತ್ತಿರುವ “ಕೋವಿ ಶೀಲ್ಡ್” ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಕ – ಡಿಸಿಜಿಐ ಅನುವು ಮಾಡಿಕೊಟ್ಟಿದೆ.

ಡಿಸಿಜಿಐ ದೇಶದಲ್ಲಿ ಕೊರೊನಾ ಸೋಂಕು ಲಸಿಕೆಗೆ ತುರ್ತು ಬಳಕೆ ಮಾಡಲು ಅವಕಾಶ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳ ಜೊತೆ ಸಭೆ ಕರೆದಿದ್ದಾರೆ.

೩೦ ಕೋಟಿಗೆ ಲಸಿಕೆ ಗುರಿ:

ದೇಶದಲ್ಲಿ ೩೦ ಕೋಟಿ ಜನರಿಗೆ ಕೊರೋನೋ ಲಸಿಕೆ ಹಾಕುವ ಉದ್ದೇಶ ಹೊಂದಲಾಗಿದೆ ಅದರಲ್ಲಿ ಮೊದಲ ಹಂತದಲ್ಲಿ ೩ ಕೋಟಿ ಆರೋಗ್ಯ ಸಿಬ್ಬಂದಿ ದಾದಿಯರು ವೈದ್ಯರು ಸೇರಿದಂತೆ ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿದೆ.

ಆ ಬಳಿಕ ೫೦ ವರ್ಷ ದಾಟಿದ ಜನರಿಗೆ ಹಾಗೂ ಇನ್ನಿತರೆ ಮುಂಚೂಣಿ ಕಾರ್ಯಪಡೆ ಗಳಲ್ಲಿ ತೊಡಗಿಸಿಕೊಂಡಿರುವ ೨೭ ಕೋಟಿ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ