ಲಸಿಕೆ ವಿತರಣೆ ಮಾತು ತಪ್ಪಿದ ಸರ್ಕಾರ

ಬೆಂಗಳೂರು,ಮೇ ೧- ಮೇ ೧ ರಿಂದ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಹೇಳಿದ್ದ ಸರ್ಕಾರಕ್ಕೆ ಮಾತು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಾವುದೇ ಹೇಳಿಕೆ ಕೊಡುವ ಮುನ್ನ ಜವಾಬ್ದಾರಿ ಇರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಲಸಿಕೆಯೇ ಬಂದಿಲ್ಲ. ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡುವುದು ಯಾವಾಗ? ನನ್ನ ಪ್ರಕಾರ ಈ ತಿಂಗಳಾಂತ್ಯಕ್ಕೆ ಲಸಿಕೆ ಸಿಗಬಹುದು ಎಂದರು.
ಲಸಿಕೆ ಕೊಡುವ ಮುನ್ನವೇ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ೩.೫ ಕೋಟಿ ಯುವ ಜನರಿದ್ದಾರೆ. ಇವರೆಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖ್ಯಕಾಯದರ್ಶಿ ಜತೆ ನಾನು ಮಾತನಾಡಿದ್ದೇನೆ. ಲಸಿಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಲಸಿಕೆ ಬಂದಿಲ್ಲದಿದ್ದರೂ ಫೋಟೊಗೆ ಮತ್ತು ಸುದ್ದಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಲಸಿಕೆಗೆ ಚಾಲನೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ ಅವರು ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಲಸಿಕೆ ಪ್ರಗತಿ ಹೆಚ್ಚಿಲ್ಲ. ೪೫ ವರ್ಷ ಮೇಲ್ಪಟ್ಟವರಿಗೆ ಶೇ. ೨೦ ರಷ್ಟು ಮಾತ್ರ ಲಸಿಕೆ ಹಾಕಲಾಗಿದೆ ಎಂದರು.
ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಆರೋಗ್ಯ ಸಚಿವರೂ ದೂರವಾಣಿಗೆ ಸಿಗುತ್ತಿಲ್ಲ. ಔಷಧಿ ಇಲ್ಲ ಒಂದು ರೀತಿ ಅರಾಜಕತೆ ತಾಂಡವವಾಡುತ್ತಿದೆ ಎಂದರು.
ರಾಜ್ಯದಲ್ಲಿ ಲಾಕ್‌ಡೌನ್ ಮಾಡಿ ೪ ದಿನವಾಗಿದೆ ಲಾಕ್‌ಡೌನ್ ಪರಿಣಾಮವೇ ಗೊತ್ತಾಗುತ್ತಿಲ್ಲ. ಈಸರ್ಕಾರಕ್ಕೆ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಎಂದರೆ ಅಧಿಕಾರದಿಂದ ಕೆಳಗಿಳಿಯಲಿ ಎಂದರು.
ವಿರೋಧ ಪಕ್ಷವಾಗಿ ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ಆದರೂ ಸರ್ಕಾರ ಏನು ಮಾಡುತ್ತಿಲ್ಲ. ಮಂತ್ರಿಗಳಾಗೋಕೆ ಕೆಲವರು ನಾಲಾಯಕ್ ಇದ್ದಾರೆ ಎಂದರು.