ಲಸಿಕೆ ವಿತರಣೆಗೆ ವಿಮಾನ ಸಂಸ್ಥೆ ಸಿದ್ಧ

ನವದೆಹಲಿ, ನ. ೨೦- ಪ್ರಪಂಚದ್ಯಾಂತ ಹಲವು ಕಂಪನಿಗಳು ಕೊರೊನಾ ವೈರಸ್ ಲಸಿಕೆ ಅಂತಿಮ ಹಂತದ ಪ್ರಯೋಗಗಳನ್ನು ನಡೆಸುತ್ತಿರುವ ಬೆನ್ನ ಹಿಂದೆಯೇ ದೇಶದಲ್ಲಿ ತಾಪಮಾನ ಸೂಕ್ಮ ಲಸಿಕೆಗಳ ವಿತರಣೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಲು ಭಾರತೀಯ ವಿಮಾನ ನಿಲ್ದಾಣಗಳು ಹಾಗೂ ವಿಮಾನಯಾನ ಸಂಸ್ಥೆಗಳು ಮುಂದಾಗಿವೆ.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೈದರಾಬಾದ್‌ನ ಜಿಎಂಆರ್ ವಿಮಾನ ನಿಲ್ದಾಣದ ಸರಕುಗಳ ಮತ್ತು ಅತ್ಯಾಧುನಿಕ ತಾಪಮಾನ ಸೂಕ್ಮ ವಿತರಣಾ ವ್ಯವಸ್ಥೆಯನ್ನು ಹೊಂದಿರುವುದರಿಂದ ಕೋವಿಡ್ ೧೯ ಲಸಿಕೆಗಳನ್ನು ವಿತರಿಸಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ.
ದೆಹಲಿ ವಿಮಾನ ನಿಲ್ದಾಣ ವಿಶ್ವ ದರ್ಜೆ ಮೂಲ ಸೌಕರ್ಯಗಳನ್ನು ಹಾಗೂ ೨ ಸರಕು ಟರ್ಮಿನಲ್‌ಗಳನ್ನು ಹೊಂದಿದೆ. ತಾಪಮಾನ ಸೂಕ್ಮ ಸರಕು ನಿರ್ವಹಣೆಗೆ ಪ್ರಮಾಣಿಕೃತ ತಾಪಮಾನ ಸೌಲಭ್ಯವನ್ನು ಒದಗಿಸಿದೆ.
ವಾರ್ಷಿಕ ೧.೫ ಲಕ್ಷ ಮೆಟ್ರಿಕ್ ಟನ್ ನಿರ್ವಹಿಸುತ್ತಿವೆ. ೨೫ ರಿಂದ ೨೦ ಡಿಗ್ರಿ ಸೆಲ್ಸಿಯಸ್‌ವರೆಗಿನ ಪ್ರತ್ಯೇಕ ತಂಪು ಕೋಣೆಗಳನ್ನು ಒಳಗೊಂಡಿರುವ ಹಿನ್ನೆಲೆ ಕೋವಿಡ್ ೧೯ ಲಸಿಕೆಯ ವಿತರಣೆಗೆ ಅನುಕೂಲಕರವಾಗಿದೆ ಎಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಕ್ತಾರರು ತಿಳಿಸಿದ್ದಾರೆ.
ಕೋವಿಡ್ ೧೯ ಲಸಿಕೆಗಳು ಲಭ್ಯವಾದ ಕೂಡಲೆ ಅವುಗಳ ತ್ವರಿತ ಹಾಗೂ ಪರಿಣಾಮಕಾರಿ ವಿತರಣೆಗೆ ಒತ್ತು ನೀಡಲಾಗಿದೆ.
ಹೈದರಾಬಾದ್ ಜಿಎಂಆರ್ ವಿಮಾನ ನಿಲ್ದಾಣದಲ್ಲೂ ಮೊದಲ ಫಾರ್ಮ್ ವಲಯ ನಿರ್ಮಾಣ ಮಾಡಲಾಗಿದೆ. ಕೋವಿಡ್ ಲಸಿಕೆ ವಿತರಣೆಗೆ ವಿಮಾನ ಸಂಸ್ಥೆ ಸಂಪೂರ್ಣ ಸಿದ್ದವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.