ಲಸಿಕೆ ವಯಸ್ಸಿನ ಮಿತಿ ತೆಗೆಯಿರಿ: ಗೆಹ್ಲೋಟ್


ಜೈಪುರ,ಮಾ.೨೫- ಕೊರೊನಾ ಲಸಿಕೆ ಪಡೆಯಲು ಜಾರಿಗೊಳಿಸಿರುವ ವಯಸ್ಸಿನ ಮಿತಿಯನ್ನು ತೆಗೆದುಹಾಕಬೇಕೆಂದು ರಾಜಾಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನಿನ್ನೆ ದೇಶದಲ್ಲಿ ೪೭,೨೬೨ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಈಗ ೬೦ ವರ್ಷ ವಯೋಮಾನ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ೪೫ ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗುತ್ತದೆ. ಏ. ೧ ರಿಂದ ೪೫ ವರ್ಷದವರಿಗೂ ಲಸಿಕೆ ಹಾಕಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ.
ಆದರೆ, ಸೋಂಕು ತಡೆಗಟ್ಟುವ ದೃಷ್ಟಿಯಿಂದ ಲಸಿಕೆ ಪಡೆಯಲು ವಯಸ್ಸಿನ ಮಿತಿ ಅಡ್ಡಗಾಲಾಗಿದೆ. ಅಲ್ಲದೆ ಮಕ್ಕಳಿಗೂ ಸೋಂಕು ತಗುಲುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ಪಡೆಯಲು ಯಾವುದೇ ವಯಸ್ಸಿನ ಮಿತಿ ಬೇಡ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಪುಷ್ಠಿ ನೀಡುವಂತೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೊರೊನಾ ಸೋಂಕು ತಡೆಗಟ್ಟಲು ಲಸಿಕೆ ಪಡೆಯುವುದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಯೋಮಾನದ ಮಿತಿಯನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಆರೋಗ್ಯ ಸಚಿವ ಡಾ. ರಘುಶರ್ಮಾ ಪ್ರತಿಕ್ರಿಯೆ ನೀಡಿ ದೇಶದಲ್ಲಿ ೨ನೇ ಅಲೆ ಕಾಣಿಸಿಕೊಂಡಿದ್ದು, ಲಸಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಬೇಕು. ಇದಕ್ಕೆ ಇರುವ ಪರಿಹಾರವೆಂದರೆ ಲಸಿಕೆ ಪಡೆಯುವ ವಯೋಮಾನದ ಮಿತಿಯನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದರು.