ಲಸಿಕೆ ರಫ್ತಿಗೆ ಕೇಂದ್ರ ತಾತ್ಕಾಲಿಕ ತಡೆ


ದೆಹಲಿ, ಮಾ.೨೫- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶೀಯ ಮಟ್ಟದಲ್ಲಿ ವ್ಯಾಕ್ಸಿನ್ ನೀಡುವಿಕೆ ಕಾರ್ಯಕ್ಕೆ ಚುರುಕು ನೀಡಿರುವ ಪರಿಣಾಮ ಆಕ್ಸ್‌ಫರ್ಡ್-ಆಸ್ಟ್ರಾಝೆನೆಕಾ ಲಸಿಕೆಯ ಮೇಲಿನ ರಫ್ತನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ.
ಕಳೆದ ೧೦ ದಿನಗಳಿಂದ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿದೇಶ ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ೧೯೦ ರಾಷ್ಟ್ರಗಳಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ನೇತೃತ್ವದ ಕೋವ್ಯಾಕ್ಸ್ ಯೋಜನೆಗೆ ಇದರಿಂದ ಭಾರೀ ಹಿನ್ನಡೆ ಉಂಟಾಗಲಿದೆ. ವಿಶ್ವದ ಅಗ್ರಶ್ರೇಯಾಂಕದ ವ್ಯಾಕ್ಸಿನ್ ತಯಾರಿಕಾ ಕಂಪೆನಿಯಾದ ಸೆರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾವು ಭಾರತದಲ್ಲಿ ಆಕ್ಸ್‌ಫರ್ಡ್-ಆಸ್ಟ್ರಾಝೆನೆಕಾ ಲಸಿಕೆಯ ಉತ್ಪಾದನೆಯಲ್ಲಿ ತೊಡಗಿದೆ. ಮುಖ್ಯವಾಗಿ ಭಾರತವು ಇಲ್ಲಿಯವರೆಗೆ ಸುಮಾರು ೭೬ ರಾಷ್ಟ್ರಗಳಿಗೆ ೬೦ ಮಿಲಿಯನ್‌ಗೂ ಹೆಚ್ಚಿನ ಕೊರೊನಾ ಲಸಿಕೆಯನ್ನು ಪೂರೈಸಿದೆ. ಆದರೆ ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ಬೇಡಿಕೆಯನ್ನು ಈಡೇರಿಸುವ ಗುರಿಯಿಂದಾಗಿ ಲಸಿಕೆಯ ರಫ್ತನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎನ್ನಲಾಗಿದೆ.