ಲಸಿಕೆ ಪೂರೈಸಿದರೆ ಅರ್ಧ ಹಣ ಕೊಡಲು ಸಿದ್ಧ: ಎಸ್ಸೆಸ್ಸೆಂ

ದಾವಣಗೆರೆ.ಮೇ.೨೦:  ಕೊರೊನಾ ಸೋಂಕು ತಗಲದಂತೆ ಮಾಡಬೇಕಾದರೆ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ತಮ್ಮ ಎರಡು ಕ್ಷೇತ್ರದ ಜನರಿಗೆ ಲಸಿಕೆ ಕೊಟ್ಟಲ್ಲಿ ಅದಕ್ಕೆ ತಗಲುವ ವೆಚ್ಚದ ಅರ್ಧದಷ್ಟು ಹಣ ಪಾವತಿಸುತ್ತೇವೆ. ಅದರಂತೆ ಸರ್ಕಾರ ಲಸಿಕೆ ಪೂರೈಕೆ ಮಾಡಬೇಕು ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, .ಕೊರೊನಾ ಸಂಕಷ್ಟದ ಕಾಲಘಟ್ಟದಲ್ಲಿ ಸರ್ಕಾರ ಮೊದಲಿಗೆ ವ್ಯಾಕ್ಸಿನ್ ಮತ್ತು ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾಸ್ಪತ್ರೆಯಲ್ಲಿ ವಾರ್ ರೂಂ ಸ್ಥಾಪಿಸಿ ಅದರ ಮೂಲಕ ಸೋಂಕಿತರಿಗೆ ಬೆಡ್‌ಗಳನ್ನು ನೀಡುವ ಕೆಲಸ ಮಾಡಬೇಕು. ಜೊತೆಗೆ ನಿರ್ವಾಹಣೆ ಸಮರ್ಪಕವಾಗಿರಬೇಕು. ಜನರ ಪ್ರಾಣ ರಕ್ಷಿಸಬೇಕಾಗಿರುವುದು ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ನಾವುಗಳು ಸಂಪೂರ್ಣ ಸಹಕಾರ ಕೊಡತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ವ್ಯಾಕ್ಸಿನ್, ಆಕ್ಸಿಜನ್ ಕೊರೊತೆ ಉಂಟಾಗಿದ್ದು, ಇದರ ನಿವಾರಣೆ ರಾಜ್ಯದ ಎಲ್ಲಾ ಸಂಸದರು ಪ್ರಧಾನ ಮಂತ್ರಿ ಮೋದಿ ಅವರ ಬಳಿ ಹೋಗಿ ಕುಳಿತುಕೊಳ್ಳಬೇಕು. ಆದರೆ, ಒಂದಿಬ್ಬರೂ ಸಂಸದರು ಮಾತ್ರ ಪ್ರಧಾನಿಯೊಂದಿಗೆ ಮಾತನಾಡುತ್ತಾರೆ. ಉಳಿದವರು ಮಾತನಾಡಲು ಹೆದರುತ್ತಾರೆ. ಇದನ್ನೆಲ್ಲ ನೋಡಿದರೆ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ದೂರಿದರು.ಆಸ್ಪತ್ರೆಗಳು ನಡೆಸುವುದು ಕಷ್ಟದ ಕೆಲಸ. ಅವರಿಗೇನೂ ಗೊತ್ತು. ವಿಚಾರ ತಿಳಿಯದೇ ಏನೇನೋ ಮಾತನಾಡುತ್ತಾರೆ. ಗುಟ್ಕಾ ಉತ್ಪಾದನೆ ಮಾಡಿ ಮಾರಾಟ ಮಾಡುವಷ್ಟು ಸುಲಭ ಅಲ್ಲ. ಮೊದಲಿಗೆ ಕೋವಿಡ್ ನೀತಿ-ನಿಯಮಗಳು ಏನು, ಕೋವಿಡ್ ಕೇರ್ ಸೆಂಟರ್ ಅಂದರೆ ಏನು ಎಂದು ತಿಳಿದುಕೊಳ್ಳಲಿ, ನಾನು, ನಾಳೆಯೇ ಐದು ಸಾವಿರ ಬೆಡ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ರನ್ನಾಗಿ ಮಾಡುತ್ತೇನೆ. ನಮ್ಮ 20ಕ್ಕೂ ಹೆಚ್ಚು ಹಾಸ್ಟೆಲ್‌ಗಳಿಗೆ ಅವುಗಳನ್ನು ಬಿಟ್ಟುಕೊಡುತ್ತೇವೆ. ಈಗಾಗಲೇ ಕೆ.ಆರ್. ರಸ್ತೆಯಲ್ಲಿನ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಜಿಲ್ಲಾಧಿಕಾರಿಗೆ 15 ದಿನಗಳ ಹಿಂದೆ ಹೇಳಿದ್ದೆ. ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಬಾಪೂಜಿ ಆಸ್ಪತ್ರೆ, ಎಸ್‌ಎಸ್‌ಹೈಟೆಕ್ ಆಸ್ಪತ್ರೆಗೆ ಜನರು ಬಂದು ದಾಖಲಾದರೆ ನಾವು ಬೇಡ ಅನ್ನುವುದಕ್ಕೆ ಆಗುತ್ತದೆಯೇ. ಬಾಪೂಜಿ ಆಸ್ಪತ್ರೆಗೆ ಚಿಗಟೇರಿ ಜಿಲ್ಲಾಸ್ಪತ್ರೆಯು ಲಿಂಕ್ ಇದೆ. ಚಿಗಟೇರಿ ಆಸ್ಪತ್ರೆಯಲ್ಲಿ ಕೇವಲ 40 ಜನ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದವರು ನಮ್ಮಗಳ ಆಸ್ಪತ್ರೆಯ ವೈದ್ಯರು, ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನಾವುಗಳು ಸಂಬಳ ಕೊಡುತ್ತಿದ್ದೇವೆ. ಆದರೂ ನಮ್ಮನ್ನು ಹೀಯಾಳಿಸುತ್ತಾರೆ ಎಂದು ಹೇಳಿದರು.ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಒಂಭತ್ತು ವೆಂಟಿಲೇಟರ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತೀವೆ. ಉಳಿದವುಗಳನ್ನು ನಿರ್ವಾಹಣೆ ಮಾಡಲು ತಾಂತ್ರಿಕ ತಜ್ಞರಿಲ್ಲ ಎಂದು ಹಾಗೇ ಇಟ್ಟಿದ್ದಾರೆ. ಇದು ಆಡಳಿತ ವೈಫಲ್ಯ ಅಲ್ಲವೇ ಎಂದು ಪ್ರಶ್ನಿಸಿದ ಎಸ್‌ಎಸ್ ಮಲ್ಲಿಕಾರ್ಜುನ್ ಜಿಲ್ಲಾಧಿಕಾರಿ ನನ್ನೊಂದಿಗೆ ಬಂದು ಅರ್ಧ ಗಂಟೆ ಚರ್ಚೆ ಮಾಡಲಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಹೇಳಿದರು.ಕೋವಿಡ್ ಸೋಂಕಿತರಿಗೆ ರೆಮ್‌ಡಿಸಿವಿರ್, ಆಕ್ಸಿಜನ್ ಕೊರೊತೆ ಇದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರು ದೆಹಲಿ ಹೋಗಿ, ಅಲ್ಲಿ ಮತನಾಡಿ ಜಿಲ್ಲೆಗೆ ಬೇಕಾದ ಅಗತ್ಯತೆಗಳನ್ನು ತರುವಂತೆ ಆಗಬೇಕು. ಈಗ ಅಗತ್ಯವಿರುವುದು ಕೋವಿಡ್ ಸೆಂಟರ್ ಕೇರ್ ಅಲ್ಲ, ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕಿವಿಮಾತು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸೈಯದ್ ಸೈಫುಲ್ಲಾ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಚಮನ್ ಸಾಬ್, ಮಂಜುನಾಥ ಗಡಿಗುಡಾಳ್, ಇಟ್ಟಿಗುಡಿ ಮಂಜುನಾಥ, ಮುಖಂಡರಾದ ಮುದೇಗೌಡ್ರು ಗಿರೀಶ್, ದಿನೇಶ್ ಕೆ. ಶೆಟ್ಟಿ, ಗಣೇಶ್ ಹುಲ್ಮಮನಿ ಆಯೂಬ್ ಫೈಲ್ವಾನ್ ಮತ್ತಿತರರಿದ್ದರು.