ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಎಸ್‌ಐಐಗೆ ನೋಟಿಸ್

ಪುಣೆ, ಎ.೮- ಕೊರೊನಾ ವಾಕ್ಸಿನ್ ಪೂರೈಕೆಯಲ್ಲಿ ವಿಳಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ಗೆ ಆಸ್ಟ್ರಾಝೆನೆಕಾ ಕಂಪೆನಿ ನೋಟಿಸ್ ನೀಡಿದೆ.
ಇಂಗ್ಲೆಂಡ್ ಮೂಲದ ಆಸ್ಟ್ರಾಝೆನೆಕಾ ಕಂಪೆನಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಉತ್ಪಾದಿಸಲು ಭಾರತದ ಎಸ್‌ಐಐ ಕಂಪೆನಿಗೆ ಹೊಣೆ ನೀಡಲಾಗಿತ್ತು. ಈ ಲಸಿಕೆ ಕೋವಿಶೀಲ್ಡ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ಆದರೆ ಹಿಂದಿನ ಒಪ್ಪಂದದಂತೆ ಎಸ್‌ಐಐ ಸೂಕ್ತ ರೀತಿಯಲ್ಲಿ ಲಸಿಕೆಗಳನ್ನು ಪೂರೈಸುತ್ತಿಲ್ಲ ಎಂದು ಆರೋಪಿಸಿರುವ ಆಸ್ಟ್ರಾಝೆನೆಕಾ ಕಂಪೆನಿ ಸದ್ಯ ಭಾರತದ ಕಂಪೆನಿಗೆ ನೋಟಿಸ್ ನೀಡಿದೆ. ನೋಟಿಸ್ ನೀಡಿದ ವಿಚಾರವನ್ನು ಎಸ್‌ಐಐ ಕಂಪೆನಿಯ ಸಿಇಒ ಆದಾರ್ ಪೂನಾವಾಲಾ ಅವರು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಕೋವ್ಯಾಕ್ಸ್ ಯೋಜನೆಗೂ ಎಸ್‌ಐಐ ವಾಕ್ಸಿನ್ ಪೂರೈಸುತ್ತಿದೆ. ಆದರೆ ಮಾರ್ಚ್ ೨೫ರ ನಂತರ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರುಗತಿ ದಾಖಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಲಸಿಕೆ ಅಭಿಯಾನ ಚುರುಕು ಪಡೆದುಕೊಂಡ ಹಿನ್ನೆಲೆಯಲ್ಲಿ ಆಸ್ಟ್ರಾಝೆನೆಕಾ ಕಂಪೆನಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು ೯೦ ಮಿಲಿಯನ್ ಡೋಸ್‌ಗಳ ಪೂರೈಕೆ ವ್ಯತ್ಯಯಗೊಂಡಿದೆ ಎನ್ನಲಾಗಿದೆ. ಎಸ್‌ಐಐ ಕಂಪೆನಿಗೆ ಆಸ್ಟ್ರಾಝೆನೆಕಾ ಲೀಗಲ್ ನೋಟಿಸ್ ಜಾರಿ ಮಾಡಿದ್ದು, ಇದು ಕೇಂದ್ರ ಸರ್ಕಾರಕ್ಕೂ ತಿಳಿದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಆದಾರ್ ಪೂನಾವಾಲಾ ತಿಳಿಸಿದ್ದಾರೆ.