ಲಸಿಕೆ ಪೂರೈಕೆಯಲ್ಲಿ ಜಿಲ್ಲಾಡಳಿತ ವಿಫಲ; ಆರೋಪ

ದಾವಣಗೆರೆ. ಮೇ.೩; ಲಸಿಕೆ ಸಮರ್ಪಕವಾಗಿ ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ಹಾಗೂ ದಾವಣಗೆರೆ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಸಾರ್ವಜನಿಕರು ಲಸಿಕೆ ಪಡೆಯಲು ನಗರದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದಿನೇ ದಿನೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಆದರೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಬಹುತೇಕ ಹಿರಿಯರೇ ಹೆಚ್ಚಾಗಿ ಲಸಿಕೆ ಹಾಕಿಸಿಕೊಳ್ಳಲು ಬರುತ್ತಿದ್ದಾರೆ ಆದರೆ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಖಾಲಿಯಾಗಿದೆ ಎಂದು ಹೇಳಲಾಗುತ್ತಿದೆ.ಪ್ರತಿನಿತ್ಯ ಕೇಂದ್ರದ ಬಳಿ ಬೆಳಗ್ಗೆ ೬ ರಿಂದಲೇ ಸರತಿ ಸಾಲು ಇರುತ್ತದೆ ಅಧಿಕಾರಿಗಳು ೧೦ ಗಂಟೆಗೆ ಆಗಮಿಸಿ ಲಸಿಕೆ ಇಲ್ಲ ಎನ್ನುತ್ತಾರೆ ಆದ್ದರಿಂದ ಲಸಿಕೆ ಬಗ್ಗೆ ಕೇಂದ್ರಗಳಲ್ಲಿ ಮಾಹಿತಿ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ ಎಲ್ಲರಿಗೂ ಲಸಿಕೆ ಹಾಕುವುದು ಶಾಶ್ವತ ಪರಿಹಾರ ಅದನ್ನು ಬಿಟ್ಟು ಲಾಕ್ ಡೌನ್ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡುವುದು ಸರಿಯಲ್ಲ.ಮೇ.೧ ರಿಂದ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಆನ್ ಲೈನ್ ನೊಂದಣಿ ಮಾಡಲು ಪ್ರಧಾನಿಯವರು ಘೋಷಿಸಿದ್ದಾರೆ.ಇಡೀ ದೇಶದಲ್ಲಿ ೧ ಕೋಟಿಗೂ ಅಧಿಕ ಜನ ನೊಂದಣಿ ಮಾಡಿಸಿದ್ದಾರೆ.ದಾವಣಗೆರೆಯಲ್ಲಿ ನೊಂದಣಿ ಮಾಡಿಸಿದವರಿಗೆ ಇಂದು ಲಸಿಕೆ ನೀಡುವುದಾಗಿ ಮೇಸೆಜ್ ಬಂದಿದೆ ಆದರೆ ಲಸಿಕಾ ಕೇಂದ್ರಗಳಿಗೆ ಹೊದರೆ ಅಲ್ಲಿ ಲಸಿಕೆಯೇ ಇಲ್ಲ ಇದರಿಂದಾಗಿ ಗೊಂದಲ ಉಂಟಾಗುತ್ತಿದೆ.ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು ಆದರೆ ಲಸಿಕೆ ತರಿಸಲು ಕಂಪನಿಗಳಿಗೆ ಬಾಕಿ ಹಣ ನೀಡಬೇಕು ಅದಕ್ಕಾಗಿಯೇ ಈ ರೀತಿ ವಿಳಂಬವಾಗುತ್ತಿದೆ.ಆದ್ದರಿಂದ ರಾಜ್ಯ ಸರ್ಕಾರ ಲಸಿಕೆ ಅಭಾವವಾಗದಂತೆ ನೊಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಕೆ.ವಮನ್ ಸಾಬ್,ಮಂಜುನಾಥ್ ಗಡಿಗುಡಾಳ್,ಅಬ್ದುಲ್ ಲತೀಫ್, ಇಟ್ಟಿಗುಡಿ ಮಂಜುನಾಥ್ ಇದ್ದರು.