ಲಸಿಕೆ ಪಡೆಯುವಂತೆ ಸ್ಥಳೀಯರಿಗೆ ಮನವೊಲಿಸಲು ಮುಂದಾಗಿ

ಪಿರಿಯಾಪಟ್ಟಣ:ಮಾ:24: ಕೊರೊನಾ ಲಸಿಕೆ ಪಡೆಯುವಂತೆ ಸ್ಥಳೀಯರ ಮನವೊಲಿಸಲು ಗ್ರಾಮ ಪಂಚಾಯಿತಿ ಸದಸ್ಯರು ಮುಂದಾಗಬೇಕು ಎಂದು ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ತಿಳಿಸಿದರು.
ತಾಲ್ಲೂಕಿನ ದೊಡ್ಡಬೇಲಾಳು ಮತ್ತು ಕಂಪಲಾಪುರ ಗ್ರಾಮ ಪಂಚಾಯಿತಿ ಕಚೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಜನಪ್ರತಿನಿಧಿಗಳ ಸಭೆ ನಡೆಸಿ ಅವರು ಮಾತನಾಡಿದರು, ಕೊರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಪ್ರತಿಯೊಬ್ಬರು ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಬೇಕು, ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ತಮ್ಮ ಗ್ರಾಮ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡುವ ರಾಜಕೀಯ ಪಕ್ಷದ ಮುಖಂಡರು ಗೆದ್ದ ಮೇಲೆಯೂ ಸಹ ಜವಾಬ್ದಾರಿ ಅರಿತು ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಬೇಕು, ನೂತನ ಗ್ರಾ.ಪಂ ಸದಸ್ಯರು ತಮ್ಮ ಹಳ್ಳಿ ವ್ಯಾಪ್ತಿಯ ಸರ್ಕಾರದ ನಿಯಮಾನುಸಾರ ಕೊರೊನಾ ಲಸಿಕೆ ಪಡೆಯಲು ಅರ್ಹರಿರುವವರನ್ನು ಗುರುತಿಸಿ ಅವರಿಗೆ ಲಸಿಕೆ ಪಡೆಯಲು ಮನವೊಲಿಸುವಂತೆ ಕೋರಿದರು.
ಕಂಪಲಾಪುರ ಹಾಗೂ ದೊಡ್ಡಬೇಲಾಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ಅವರು ರೋಗಿಗಳ ಯೋಗಕ್ಷೇಮ ವಿಚಾರಿಸಿ ಕೊರೊನಾ ಲಸಿಕೆ ಪಡೆಯಲು ಯಾವುದೇ ಅನುಮಾನ ಹಾಗೂ ಗೊಂದಲಗಳಿಗೆ ಕಿವಿಗೊಡದೆ ಹಿಂಜರಿಕೆ ಮನೋಭಾವ ಬಿಟ್ಟು ಲಸಿಕೆ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭ ಕಂದಾಯಾಧಿಕಾರಿ ಶ್ರೀಧರ್, ಕಂಪಲಾಪುರ ಗ್ರಾ.ಪಂ ಅಧ್ಯಕ್ಷೆ ರಾಣಿ, ಉಪಾಧ್ಯಕ್ಷ ರಾಮಲಿಂಗಂ ಮತ್ತು ಸದಸ್ಯರು, ಪಿಡಿಒ ಪರಮೇಶ್, ವೈದ್ಯಾಧಿಕಾರಿ ಡಾ.ಪ್ರಸನ್ನ ಕುಮಾರ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಹೇಮಲತಾ, ಸುಕನ್ಯಾ, ದೊಡ್ಡಬೇಲಾಳು ಗ್ರಾ.ಪಂ ಪ್ರಥಮ ದರ್ಜೆ ಸಹಾಯಕ ದೇವರಾಜ್ ಮತ್ತು ಸಿಬ್ಬಂದಿ, ವೈದ್ಯಾಧಿಕಾರಿ ಡಾ.ಶಿವಾನಂದ, ಪುರುಷ ಆರೋಗ್ಯ ಸಹಾಯಕ ಪ್ರಸನ್ನ, ಸಹಾಯಕಿಯರಾದ ಲಲಿತಾ, ಶುಭ, ಗೌರಮಣಿ, ಗೀತಾ, ಸುಶೀಲಾ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.