ಲಸಿಕೆ ಪಡೆಯಲು ಜನರ ಹಿಂದೇಟು

ಬಸವಕಲ್ಯಾಣ:ಎ.28: ನಗರದ ಧರ್ಮಪ್ರಕಾಶ ಓಣಿಯಲ್ಲಿನ ಇಬ್ಬರು ಕೋವಿಡ್ ಲಸಿಕೆ ಪಡೆದ ಮರುದಿನ ಆಸ್ಪತ್ರೆಗೆ ದಾಖಲಾಗಿ ನಿಧನ ಹೊಂದಿರುವ ಕಾರಣವನ್ನು ಮುಂದೆ ಮಾಡಿ ಅಲ್ಲಿನ ನಿವಾಸಿಗಳು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಗೋಳು ತೋಡಿಕೊಂಡರು.

ನಗರಸಭೆ ಸದಸ್ಯ ಮಾರುತಿ ಲಾಡೆ ಹಾಗೂ ಅವರ ಜತೆಯಲ್ಲಿರುತ್ತಿದ್ದ ಇನ್ನೊಬ್ಬರು ಮೃತಪಟ್ಟವರು. ಈ ಘಟನೆಯ ನಂತರ ಆ ಓಣಿಗೆ ಹೋಗಿ ಜಾಗೃತಿ ಕೈಗೊಳ್ಳಲಾಯಿತು. ಲಸಿಕೆಯಿಂದ ಯಾವುದೇ ಹಾನಿ ಇಲ್ಲ. ಕೋವಿಡ್ ತಪಾಸಣೆಯಿಂದ ಸೋಂಕು ಹರಡುವಿಕೆ ತಡೆಗಟ್ಟಬಹುದು ಎಂದು ಮನವರಿಕೆ ಮಾಡಿದರೂ ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಪೌರಾಯುಕ್ತ ಗೌತಮಬುದ್ಧ ಕಾಂಬಳೆ ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿ.ಜಿ.ರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್ ಠಾಕೂರ, ಎಇಇ ಶಿವಕುಮಾರ ಬುದ್ರೆ ಇದ್ದರು.