ಲಸಿಕೆ ಪಡೆಯಲು ಗೊಂದಲ ಪರಿಹರಿಸಲು ಮನವಿ

ದಾವಣಗೆರೆ. ಮೇ.೨೭;  ಉತ್ಪಾದನೆ ಕೊರತೆಯಿಂದ ಲಸಿಕೆ ಹೆಚ್ಚಿನ  ಪ್ರಮಾಣದಲ್ಲಿ  ಜಿಲ್ಲಾಮಟ್ಟದ ಲ್ಲಾಗಲಿ  ತಾಲೂಕು ಮಟ್ಟದಲ್ಲಿಯಾಗಲಿ ದೊರೆಯುತ್ತಿಲ್ಲ. ಪ್ರಾರಂಭದಲ್ಲಿ ಜನರು ಪಡೆದುಕೊಳ್ಳಲಿಲ್ಲ. ನಂತರ ಕೋರೋನ ಹೆಚ್ಚಾದ ನಂತರ ಜನರು ಲಸಿಕೆಗಾಗಿ ಆರೋಗ್ಯ ಕೇಂದ್ರಗಳ ಮುಂದೆ ಗುಂಪು ಸೇರತೊಡಗಿದ್ದಾರೆ ಇದಕ್ಕೆ ಜಿಲ್ಲಾಡಳಿತಸಮರ್ಪಕ ವ್ಯವಸ್ಥೆ ಮಾಡುವ ಅವಶ್ಯಕತೆ ಇದೆಎಂದು ಪಾಲಿಕೆಯ ನಗರ ಯೋಜನೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್ ಹೇಳಿದ್ದಾರೆ.ಪ್ರತಿ ಆರೋಗ್ಯ ಕೇಂದ್ರಕ್ಕೆ 100ರಿಂದ 150ಲಸಿಕೆಕೊಡುತ್ತಿದ್ದಾರೆ.ಆದರೆ  ಆರೋಗ್ಯ ಕೇಂದ್ರಗಳಲ್ಲಿ ನಿಂತಂತಹ ಜನಗಳಿಗೆ ಟೋಕನ್ ಕೊಡುವ ವ್ಯವಸ್ಥೆ ಮಾಡಿರುತ್ತಾರೆ. ನಡುನಡುವೆ ಅಧಿಕಾರಿಗಳ ಕುಟುಂಬವರ್ಗದವರು ಬಂಧುಗಳು ಬಂದು ಹಾಕಿಸಿಕೊಳ್ಳುತ್ತಿದ್ದಾರೆ. ಇದರಿಂದ ಟೋಕನ್ ಪಡೆದು ನಿಂತವರಿಗೆ ಲಸಿಕೆ ದೊರೆಯುತ್ತಿಲ್ಲ.  ಇದರಿಂದ ರೋಸಿ ಹೋದ ಜನ ಪ್ರತಿಭಟನೆ ಹಂತಕ್ಕೆ ಹೋಗುತ್ತಿದ್ದಾರೆ.  ಇದನ್ನು ತಪ್ಪಿಸಬೇಕಾದರೆ ವ್ಯವಸ್ಥಿತವಾಗಿ ಲಸಿಕೆ ಹಾಕುವ ವ್ಯವಸ್ಥೆಯಾಗಬೇಕು. ಹೇಗೆಂದರೆ ವಾರ್ಡ್ ಮಟ್ಟದಲ್ಲಿ ಲಸಿಕೆ ಹಾಕುವ ವ್ಯವಸ್ಥೆಯಾಗಬೇಕು.  ವಾರ್ಡ್ನಲ್ಲಿ ಒಂದು ಬೂತ್ ವ್ಯಾಪ್ತಿಯಲ್ಲಿ ಸುಮಾರು ಮುನ್ನೂರು ಮನೆಗಳಿದ್ದರೆ ಆ ಮನೆಗಳಲ್ಲಿ 45 ವರ್ಷ ಮೇಲ್ಪಟ್ಟವರು ಮತ್ತು ಎರಡನೇ ಡೋಸು ಪಡೆಯುವವರಿಗೆ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಹಾಯಕರು ಗಳಿಂದ ಟೋಕನ್ ಕೊಟ್ಟು ಬರಬೇಕು. ಟೋಕನ್ ಪಡೆದವರು ಮಾತ್ರ ಲಸಿಕಾ  ಕೇಂದ್ರಕ್ಕೆ ಬಂದು ಸಮಯಕ್ಕೆ ಸರಿಯಾಗಿ ಲಸಿಕೆ ಪಡೆಯಲು ಸಾಧ್ಯವಾಗುತ್ತದೆ. ಮರುದಿನ ಮತ್ತೆ 150ರಷ್ಟು ಲಸಿಕೆಗಳು ಬಂದರೆ ಎಲ್ಲಿ  ಬಿಟ್ಟಿರುತ್ತಾರೆಯೊ ಅಲ್ಲಿಂದ ಟೋಕನ್ ಕೊಡುವ ವ್ಯವಸ್ಥೆ ಆಗಬೇಕು.  ಟೋಕನ್ ಪಡೆದವರು ಮಾತ್ರ ಬರುವುದರಿಂದ ಗುಂಪು ಕಡಿಮೆಯಾಗುತ್ತದೆ. ಇದರಿಂದ  ಬೇರೆ ವಾರ್ಡಿನ ಜನರು ಬರಲು ಸಾಧ್ಯವಾಗುವುದಿಲ್ಲ. ಈ ರೀತಿ ಪ್ರತಿಯೊಂದು ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಭಾಗಗಳಲ್ಲೂ ಎಲ್ಲಾ 45 ವಾರ್ಡ್ ಗಳಲ್ಲಿ ಮಾಡಿದರೆ ವ್ಯವಸ್ಥಿತವಾಗಿ ಯಾವುದೇ ಗೊಂದಲವಿಲ್ಲದೆ ಲಸಿಕೆ ಆಂದೋಲನ ಸರಾಗವಾಗಿ ನಡೆಯುತ್ತದೆ. ಈ ರೀತಿ ಸರಾಗವಾಗಿ ಲಸಿಕೆ ಕೊಡುವ ವ್ಯವಸ್ಥೆಯಾಗಬೇಕಾದರೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಾಳೆ ಎಷ್ಟು ಪ್ರಮಾಣದಲ್ಲಿ ಲಸಿಕೆ ಬರುತ್ತದೆ ಎಂದು ಮೊದಲೇ ಗೊತ್ತಾಗಿದ್ದರೆ ಮಾತ್ರ ಇದೆಲ್ಲ ವ್ಯವಸ್ಥಿತವಾಗಿ ಮಾಡಬಹುದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಾಲೂಕು ಆರೋಗ್ಯ ಅಧಿಕಾರಿಗಳು ಸಂಬಂಧಪಟ್ಟ ಲಸಿಕೆ ಉಸ್ತುವಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ ಎಂದಿದ್ದಾರೆ.