ಲಸಿಕೆ ಪಡೆಯದವರಿಗೆ ಹೋಟೆಲ್, ಮಾಲ್ ಪ್ರವೇಶ ತ.ನಾಡಲ್ಲಿ ನಿಷೇಧ

ಮಧುರೈ,ಡಿ-೪. ಕರ್ನಾಟಕದಲ್ಲಿ ಒಮಿಕ್ರೋನ್ ಎರಡು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನೆರೆಯ ತಮಿಳುನಾಡಿನಲ್ಲಿ ಕಟ್ಟೆಚ್ಚರ ಕ್ರಮಗಳನ್ನು ಕೈಗೊಂಡಿದ್ದು ಲಸಿಕೆ ಪಡೆಯದ ಮಂದಿಗೆ ಹೋಟೆಲ್ ,ಮಾಲ್, ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ನಿಷೇಧ ಹೇರಿದೆ.
ಒಂದು ವಾರದ ಒಳಗಾಗಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆಯದಿದ್ದರೆ ಅಂತವರಿಗೆ ಚಿತ್ರಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಸಾರ್ವಜನಿಕ ಸ್ಥಳಗಳು ಸೇರಿದಂತೆ ಇನ್ನಿತರೆ ವಾಣಿಜ್ಯ ಪ್ರದೇಶಗಳಿಗೆ ಜನರಿಗೆ ಮುಂದಿನ ವಾರದಿಂದ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದು ಮಧುರೈ ಜಿಲ್ಲೆಯ ಜಿಲ್ಲಾಧಿಕಾರಿ ಅನೀಶ್ ಶೇಖರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ
ಲಸಿಕೆ ಪಡೆಯದ ಜನರಿಗೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಹಿನ್ನೆಲೆಯಲ್ಲಿ ಜನರು ಕಡ್ಡಾಯವಾಗಿ ಲಸಿಕೆ ಪಡೆಯಿರಿ ಎಂದು ಅವರು ಸೂಚಿಸಿದ್ದಾರೆ.
ಕೊರೊನಾ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ತಮಿಳುನಾಡಿನಲ್ಲಿ ಹೆಚ್ಚಾಗುತ್ತಿದೆ ಜೊತೆಗೆ ಈ ನಡುವೆ ಹೊಸ ಮಾದರಿಯ ರೂಪಾಂತರಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಪ್ರತಿ ವಾರ ರಾಜ್ಯಾದ್ಯಂತ ಬೃಹತ್ ಮಟ್ಟದಲ್ಲಿ ಉಚಿತ ಲಸಿಕಾ ಅಭಿಯಾನ ವನ್ನು ಹಮ್ಮಿಕೊಳ್ಳುತ್ತಿದೆ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೂಡ ಅವರು ಮನವಿ ಮಾಡಿದ್ದಾರೆ.
ಲಸಿಕೆ ಪಡೆಯಲು ಹಿಂದೆಮುಂದೆ ನೋಡುವ ಜನರಿಗೆ ಯಾವುದೇ ಕಾರಣಕ್ಕೂ ಚಿತ್ರಮಂದಿರ ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ .ಜೊತೆಗೆ ಆರೋಗ್ಯದ ದೃಷ್ಟಿಯಿಂದ ಲಸಿಕೆ ಪಡೆಯಿರಿ ಎಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತದ ಮತ್ತು ಸರಕಾರದ ಸೂಚನೆಯನ್ನ ನಿರ್ಲಕ್ಷ ಮಾಡುವ ಜನರಿಗೆ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಡಿತ ಮಾಡುವ ಬಗ್ಗೆಯೂ ಚಿಂತನೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ಜೊತೆಗೆ ತಮಿಳುನಾಡಿಗೆ ೩ಮಂದಿ ಇಂಗ್ಲೆಂಡ್ ನಿಂದ ಸೋಂಕಿತರು ಆಗಮಿಸಿದ್ದಾರೆ. ಅದರ ಮಾಹಿತಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ