ಲಸಿಕೆ ಪಡೆದ ಸಾರಿಗೆ ನೌಕರರು ಕರ್ತವ್ಯಕ್ಕೆ

ಬೆಂಗಳೂರು,ಜೂ. ೧- ಲಾಕ್‌ಡೌನ್ ಮುಗಿದ ನಂತರ ಸಾರಿಗೆ ಸೇವೆಗಳು ಆರಂಭವಾಗುವ ಸಂದರ್ಭದಲ್ಲಿ ೨ನೇ ಡೋಸ್ ಕೋವಿಡ್ ಲಸಿಕೆ ಪಡೆದ ಸಾರಿಗೆ ನೌಕರರನ್ನು ಕರ್ತವ್ಯಕ್ಕೆ ನೊಯೋಜಿಸಲು ಆಧ್ಯತೆ ನೀಡುವುದಾಗಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಹೇಳಿದರು.
ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಹಾಗಾಗಿ, ಸಾರಿಗೆ ನೌಕರರಿಗೆ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಿದ್ದೇವೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿಂದು ಬಿಎಂಟಿಸಿಯ ಸಿಬ್ಬಂದಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಎಂಟಿಸಿಯಲ್ಲಿ ೩೧ ಸಾವಿರದಷ್ಟು ಸಿಬ್ಬಂದಿಗಳಿದ್ದು, ಇವರಲ್ಲಿ ಈಗಾಗಲೇ ಸುಮಾರು ೧೯ ಸಾವಿರದಷ್ಟು ಮಂದಿಗೆ ಲಸಿಕೆಗಳನ್ನು ಉಚಿತವಾಗಿ ನೀಡಲಾಗಿದೆ. ಉಳಿದವರಿಗೂ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ ಎಂದರು.
ರಾಜ್ಯದ ೪ ಸಾರಿಗೆ ನಿಗಮಗಳಲ್ಲೂ ಇದೇ ರೀತಿಯ ಉಚಿತ ಲಸಿಕೆ ಅಭಿಯಾನವನ್ನು ಆಯೋಜಿಸಲಾಗಿದೆ. ಎಲ್ಲ ಸಿಬ್ಬಂದಿಗಳು ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಲಾಕ್‌ಡೌನ್‌ನ್ನು ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಲಾಕ್‌ಡೌನ್ ಅವಧಿ ಮುಗಿದ ನಂತರ ಸಾರಿಗೆ ಬಸ್‌ಗಳ ಸೇವೆಯನ್ನು ಪುನರಾರಂಭಿಸುತ್ತೇವೆ ಎಂದು ಅವರು ಹೇಳಿದರು.