ಲಸಿಕೆ ನೀಡುವ ಅಭಿಯಾನಕ್ಕೆ ಅನುದಾನ ವಿನಿಯೋಗಿಸಲು ಮನವಿ

ಹುಬ್ಬಳ್ಳಿ,ಜೂ11: ಮಹಾಮಾರಿ ಕೊರೋನಾ 2ನೇ ಅಲೆಯ ಹೊಡೆತಕ್ಕೆ ಜನಜೀವನ ತತ್ತರಗೊಂಡಿದ್ದು, ಎಲ್ಲೆಲ್ಲೂ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋ. ರೂ. ಅನುದಾನವನ್ನು ಕೊರೋನಾ ಲಸಿಕೆ ನೀಡುವ ಅಭಿಯಾನಕ್ಕೆ ವಿನಿಯೋಗಿಸಲು ಅನುಮತಿ ನೀಡುವಂತೆ ಕೋರಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಗುರುವಾರ ಜಿಲ್ಲಾಧಿಕಾರಿ ನಿತೀಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಕೊರೋನಾ ಲಸಿಕೆಯ ವ್ಯಾಪಕ ಅಭಾವ ಸೃಷ್ಠಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಲಸಿಕಾ ಅಭಿಯಾನ ಆಮೆ ವೇಗದಲ್ಲಿ ನಡೆಯುತ್ತಿದ್ದು, ಪ್ರಸ್ತುತ ಜಿಲ್ಲಾ, ತಾಲೂಕು ಮಟ್ಟದಲ್ಲಿ ಹಾಗೂ ವಾರ್ಡು ಮತ್ತು ಗ್ರಾಮ ಮಟ್ಟದಲ್ಲಿಯೇ ಸೂಕ್ತ ಪ್ರಮಾಣದಲ್ಲಿ ಲಸಿಕೆ ಸಿಗುತ್ತಿಲ್ಲ. ಇದರಿಂದ ಸೋಂಕು ವ್ಯಾಪಕವಾಗಿ ಹಾಗೂ ವೇಗವಾಗಿ ಹರಡುತ್ತಿದ್ದು, ಸಕಾಲದಲ್ಲಿ ಲಸಿಕೆ ಸಿಗದೇ ಸೋಂಕಿನ 2ನೇ ಅಲೆಗೆ ತುತ್ತಾಗಿ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನಾ 2ನೇ ಅಲೆ ತೀವ್ರ ಆತಂಕ ಸೃಷ್ಠಿಸಿರುವ ಬೆನ್ನಲ್ಲೇ ಇದೀಗ 3ನೇ ಅಲೆ ಅಪ್ಪಳಿಸುವ ಮುನ್ಸೂಚನೆಯನ್ನು ತಜ್ಞರು ನೀಡಿದ್ದು, ಇದನ್ನು ಸಮರ್ಥವಾಗಿ ಎದುರಿಸಲು ಜನರಿಗೆ ಲಸಿಕೆ ನೀಡುವುದೇ ಪರಿಣಾಮಕಾರಿಯಾದ ಕ್ರಮ ಎನ್ನುವುದು ನಮ್ಮ ಹಾಗೂ ಪಕ್ಷದ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ಮೇರೆಗೆ ಲಸಿಕಾ ಅಭಿಯಾನವನ್ನು ವೇಗವಾಗಿ ಜರುಗಿಸಬೇಕೆಂದು ಒತ್ತಾಯಿಸುತ್ತಿದ್ದರೂ ಸರ್ಕಾರ ಈವರೆಗೂ ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ನನ್ನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋ.ರೂ. ಅನುದಾನವನ್ನು ಲಸಿಕೆ ನೀಡುವ ಅಭಿಯಾನಕ್ಕೆ ವಿನಿಯೋಗಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಲಸಿಕಾ ಅಭಿಯಾನ ನಡೆಸುವುದು ನನ್ನ ಕ್ಷೇತ್ರದ ಜನರ ಹಿತದೃಷ್ಠಿಯಿಂದ ಅತೀ ಜರೂರಾಗಿರುವುದರಿಂದ ತಾವುಗಳು ನನ್ನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಕೂಡಲೇ 1 ಕೋ.ರೂ. ಅನುದಾನವನ್ನು ಬಳಸಿ ನಿಯಮಾನುಸಾರ ಲಸಿಕೆ ಖರೀದಿ ಮಾಡಿ ಆ ಲಸಿಕೆಗಳನ್ನು ನನ್ನ ಕ್ಷೇತ್ರದ ಎಲ್ಲಾ ವಾರ್ಡುಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಅಭಿಯಾನ ನಡೆಸಿ ಈ ರಾಜ್ಯದ ಹಾಗೂ ನನ್ನ ಕ್ಷೇತ್ರದ ಜನರ ಪ್ರಾಣವನ್ನು ಕಾಪಾಡುವ ಮಹತ್ಕಾರ್ಯಕ್ಕೆ ಆದಷ್ಟು ಶೀಘ್ರವಾಗಿ ಅನುಮತಿ ನೀಡಬೇಕು ಎಂದು ಶಾಸಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.