ಲಸಿಕೆ ನೀಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ: ನಂಜಯ್ಯನಮಠ

ಬಾಗಲಕೋಟೆ,ಜೂ.9 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯವಿದ್ದಷ್ಟು ಲಸಿಕೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯಮಠ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಯವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿ ಮಾತನಾಡಿ ಕೊರೊನಾ ಮಹಾಮರಿಯು ಭಾರತದಲ್ಲಿಯ ಪ್ರತಿಯೊಂದು ಕುಟುಂಬಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾರಿಸಿದೆ. ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಒಂದೇ ಇದಕ್ಕೆ ಪರಿಹಾರ, ಈ ಗಂಭೀರ ವಿಷಯ ಕೇಂದ್ರ ಸರ್ಕಾರದ ಗಮನಕ್ಕೆ ಇದ್ದರೂ ಸಹ, ಈ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯನ್ನು ತೋರಿದೆ. ಲಸಿಕೆ ಪಡೆಯಲು ಆನ್‍ಲೈನ್‍ನಲ್ಲಿ ನೋಂದಾಯಿಸಲು ಹೇಳಿ ಸದರಿ ಲಸಿಕೆ ಕಾರ್ಯಕ್ರಮವು ವಿಳಂಬವಾಗುವಂತೆ ನೋಡಿಕೊಂಡು ತನ್ನ ಜನವಿರೋಧಿ ಧೋರಣೆಯನ್ನು ತೋರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 31 ಮೇ 2021 ರ ಪ್ರಕಾರ ಕೇವಲ 4.45 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಿದೆ. ಅದು ನಮ್ಮ ಜನಸಂಖ್ಯೆಯ ಕೇವಲ 3.17%. ಸರಾಸರಿ 16 ಲಕ್ಷ ಲಸಿಕೆ ಪ್ರತಿದಿನ ನೀಡಲಾಗುತ್ತದೆ. ಹೀಗಾದಲ್ಲಿ 136 ಕೋಟಿ ಜನಸಂಖ್ಯೆಯನ್ನು ಲಸಿಕೆ ತಲುಪಲು ಮೂರು ವರ್ಷ ಮೇಲ್ಪಟ್ಟು ಅವಧಿ ಬೇಕಾಗುತ್ತದೆ. ಅದಕ್ಕಾಗಿ ಪ್ರತಿದಿನ ಒಂದು ಕೋಟಿ ವಯಸ್ಕ ಜನರಿಗೆ ಲಸಿಕೆ ನೀಡಿದರೆ ಎಷ್ಟೋ ಜನರ ಜೀವಗಳನ್ನು ಉಳಿಸಬಹುದು. ನಮ್ಮ ದೇಶದ ಜನ ಕೊರೊನಾ ರೋಗದಿಂದ ನರಳುತ್ತಿರಬೇಕಾದರೆ 66 ಕೋಟಿ ಡೋಸ್ ವ್ಯಾಕ್ಸಿನ್‍ಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಈ ಕೃತ್ಯವು ಭಾರತದ ಪ್ರಜೆಗಳಿಗೆ ಮೋಸ ಮಾಡಿದಂತೆ ಆಗುತ್ತದೆ ಎಂದು ನಂಜಯ್ಯಮಠ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ವಾಯ್.ಮೇಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಎಸ್.ಎನ್.ರಾಂಪೂರ, ಗುಳೇದಗುಡ್ಡ ಬ್ಲಾಕ್ ಅಧ್ಯಕ್ಷ ರಾಜು ಜವಳಿ, ಬದಾಮಿ ಬ್ಲಾಕ್ ಅಧ್ಯಕ್ಷ ಮಲ್ಲಣ್ಣ ಎಲಿಗಾರ, ಮಹಿಳಾ ಘಟಕದ ಬ್ಲಾಕ್ ಅಧ್ಯಕ್ಷೆ ರೇಣುಕಾ ನಾಮಗೌಡರ, ಜಿಲ್ಲಾ ಸೇವಾದಳದ ಅಧ್ಯಕ್ಷ ಎನ್.ಬಿ.ಗಸ್ತಿ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸಂತೋಷ ಬಗಲಿದೇಸಾಯಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮುತ್ತು ಜೋಳದ, ನಿಂಗನಗೌಡ ಪಾಟೀಲ, ಇಬ್ರಾಹಿಂ ಕಲಾದಗಿ, ಷರೀಫ ಮುಲ್ಲಾ, ಆನಂದ ಶಿಲ್ಪಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.