ಲಸಿಕೆ ದಾಸ್ತಾನಿಗೆ ಸುಪ್ರೀಂ ಕೇಂದ್ರಕ್ಕೆ ಸೂಚನೆ


ನವದೆಹಲಿ,ಮೇ.೩೧- ಕೋವಿಡ್ ರಾಷ್ಟ್ರೀಯ ಸಮಸ್ಯೆ ದೇಶಕ್ಕೆ ಬೇಕಾಗುವ ಪೂರ್ಣ ಪ್ರಮಾಣದ ಲಸಿಕೆಯನ್ನು ಕೇಂದ್ರ ಸರ್ಕಾರವೇ ದಾಸ್ತಾನು ಮಾಡಬೇಕು. ಲಸಿಕೆ ಇಲ್ಲದೆ ರಾಜ್ಯ ಸರ್ಕಾರಗಳು ತತ್ತರಿಸಿ ಹೋಗಿವೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಜಾಗತಿಕ ಔಷದ ಉತ್ಪಾದಕ ತಯಾರಿಕಾ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಅಗತ್ಯವಿರುವ ಲಸಿಕೆ ಸಂಗ್ರಹ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಗಳಿಗೆ ಸ್ಪಷ್ಟವಾಗಿ ತಿಳಿಸಬೇಕು. ಇದರಿಂದ ಅವರಿಗೂ ಲಸಿಕೆ ವಿಷಯದಲ್ಲಿ ಸ್ಪಷ್ಟತೆ ಸಿಗಲಿದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಳಿ ಬಿಡಿಸಿದೆ.
ದೇಶದಲ್ಲಿ ಕೋವಿಡ್ ಸಂಕಷ್ಟದ ವಿಷಯದ ಕುರಿತು ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಎಲ್.ಎನ್ ರಾವ್ ಮತ್ತು ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದೇಶದಲ್ಲಿ ಕೊರೋನಾ ಲಸಿಕೆ ಅಭಾವ ಇರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಅಗತ್ಯವಾದ ಲಸಿಕೆ ಪೂರೈಕೆ ಮಾಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊರಬೇಕು ಎಂದು ಕೂಡ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಗತ್ಯ ಇರುವ ಲಸಿಕೆ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳು ನೇರವಾಗಿ ಔಷಧ ತಯಾರಿಕಾ ಕಂಪನಿಗಳಿಂದ ಖರೀದಿ ಮಾಡಲು ಜಾಗತಿಕ ಟೆಂಡರ್ ಕರೆದಿವೆ.ಇದಕ್ಕೆ ನೇರ ಕಾರಣ ರಾಜ್ಯಗಳಲ್ಲಿ ಲಸಿಕೆಯ ತೀವ್ರ ಕೊರತೆಯ ಪರಿಣಾಮ ಎಂದು ನ್ಯಾಯಾಲಯ ಹೇಳಿದೆ
ವರ್ಷಂತ್ಯದ ವೇಳೆಗೆ ಎಲ್ಲರಿಗೂ ಲಸಿಕೆ
೨೦೨೧ರ ಡಿಸೆಂಬರ್ ವೇಳೆಗೆ ೧೮ ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕುವ ಭರವಸೆಯನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ನೀಡಿದೆ.
ದೇಶಿಯ ಲಸಿಕ ಉತ್ಪಾದನೆ ಪ್ರಮಾಣ ಹೆಚ್ಚು ಮಾಡುವಂತೆ ಈಗಾಗಲೇ ಔಷಧ ತಯಾರಿಕಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದ್ದು ಕೆಲವೇ ತಿಂಗಳಲ್ಲಿ ಪ್ರಮಾಣ ಹೆಚ್ಚಳವಾಗಲಿದೆ. ೧೮ ವರ್ಷದಾಟಿದ ಎಲ್ಲರಿಗೂ ಲಸಿಕೆ ಹಾಕುವ ಹೊಂದಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಗಿದೆ.
ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರದ ನಿಲುವನ್ನು ಸುಪ್ರೀಂಕೋರ್ಟ್ ಮುಂದೆ ತಿಳಿಸಿದ್ದಾರೆ.
ದೇಶಿಯ ಔಷಧ ತಯಾರಿಕಾ ಸಂಸ್ಥೆಗಳಾದ ಭಾರತೀಯ ಸೆರಂ ಸಂಸ್ಥೆ, ಭಾರತ್ ಭಯೋಟೆಕ್ ಮತ್ತು ರೆಡ್ಡಿಸ್ ಪ್ರಯೋಗಾಲಯ ಲಸಿಕೆ ಉತ್ಪಾದನೆ ಪ್ರಮಾಣವನ್ನು ಹೆಚ್ಚು ಮಾಡಿದೆ. ಹೀಗಾಗಿ ವರ್ಷಾಂತ್ಯದೊಳಗೆ ೧೮ ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ