ಲಸಿಕೆ ತಾಲೀಮಿಗೆ ರಾಜ್ಯದಲ್ಲೂ ಸಿದ್ಧತೆ

ಬೆಂಗಳೂರು,ಜ.೭- ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡಿಕೆಯ ಸಿದ್ಧತೆ ಹಾಗೂ ನಾಳೆ ನಡೆಯಲಿರುವ ಕೊರೊನಾ ಲಸಿಕೆಯ ತಾಲೀಮಿಗೆ ಮಾಡಿಕೊಂಡಿರುವ ಎಲ್ಲ ವ್ಯವಸ್ಥೆಗಳ ಬಗ್ಗೆ ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ವಿವರ ನೀಡಿದರು.
ಕೇಂದ್ರದ ಆರೋಗ್ಯ ಸಚಿವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಇಂದು ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಳಿನ ಲಸಿಕೆ ತಾಲೀಮಿಗೆ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು.
ಕೊರೊನಾ ಲಸಿಕೆ ನೀಡಿಕೆಗೂ ರಾಜ್ಯ ಸರ್ಕಾರ ನಡೆಸಿರುವ ಸಿದ್ಧತೆಗಳನ್ನು ಈ ಸಂದರ್ಭದಲ್ಲಿ ಅವರು ಆರೋಗ್ಯ ಸಚಿವರ ಗಮನಕ್ಕೆ ತಂದರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಕೊರೊನಾ ಲಸಿಕೆಯ ತಾಲೀಮು ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಉದ್ಬವವಾಗಿರಲಿಲ್ಲ. ತಾಲೀಮು ಆರಂಭವಾದ ೨ ಗಂಟೆಗಳಲ್ಲೇ ತಾಲೀಮನ್ನು ಪೂರ್ಣಗೊಳಿಸಲಾಯಿತು.
ರಾಜ್ಯದಲ್ಲಿ ಅನುಭವಿ ಸಿಬ್ಬಂದಿಗಳಿದ್ದಾರೆ. ನಾಳೆ ನಡೆಯುವ ತಾಲೀಮನ್ನು ಎಲ್ಲ ಜಿಲ್ಲೆ, ತಾಲ್ಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುವುದು. ಇದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯಕ್ಕೆ ಬ್ರಿಟನ್‌ನಿಂದ ಆಗಮಿಸಿದ್ದ ೨,೫೨೩ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದ್ದು, ಅವರಲ್ಲಿ ೪೦ ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕಿತ ೨೫ ಮಂದಿಗೆ ಸೋಂಕು ತಗುಲಿದ್ದು, ಎಲ್ಲರನ್ನು ಐಸೋಲೇಷನ್‌ನಲ್ಲಿಡಲಾಗಿದೆ ಎಂದರು.
ರಾಜ್ಯದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ ೧೧ ದಾಟಿಲ್ಲ. ಬ್ರಿಟನ್‌ನಿಂದ ಬಂದ ಕೆಲವರು ಪತ್ತೆಯಾಗಿಲ್ಲ ಅವರ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ಕೊರೊನಾ ಹೋಗಿದೆ ಎಂಬ ಭ್ರಮೆ ಜನರಿಗೆ ಬೇಡ,ಇಂಗ್ಲೆಂಡ್, ಜರ್ಮನಿ ಮತ್ತಿತ್ತರ ದೇಶಗಳಲ್ಲಿ ಸೋಂಕು ಹೆಚ್ಚಾಗಿದೆ. ಜನ ಜಾಗೃತಿ ವಹಿಸಬೇಕು ಎಂದರು. ಹಕ್ಕಿಜ್ವರ ಹರಡದಂತೆಯೂ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.