ಲಸಿಕೆ ತಯಾರಕರ ಜೊತೆ ಸಂಜೆ ಪ್ರಧಾನಿ ಮೋದಿ ಸಭೆ

ನವದೆಹಲಿ, ಏ. ೨೦: ಒಂದೆಡೆ ದೇಶದಲ್ಲಿ ಕೊರೊನಾ ಲಸಿಕೆಗಳಿಗೆ ಕೊರತೆ ಉಂಟಾಗಿ ಪರದಾಡುವಂತಾಗಿ ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಕಾದಾಟಕ್ಕೂ ಕಾರಣವಾಗಿದೆ. ಇನ್ನೊಂದೆಡೆ ಈಗ ಮೇ ೧ರಿಂದ ೧೮ ವರ್ಷ ದಾಟಿದ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಇಂದು ಕೊರೊನಾ ಲಸಿಕೆ ಉತ್ಪಾದನಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮಾಲೋಚನೆ ನಡೆಸಲಿದ್ದಾರೆ.
ಸಂಜೆ ೬ ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಲಸಿಕೆ ಉತ್ಪಾದನಾ ಸಂಸ್ಥೆಗಳ ಮುಖ್ಯಸ್ಥರ ಜೊತೆಗಿನ ಸಭೆ ನಡೆಯಲಿದ್ದು, ದೇಶದಲ್ಲಿ ಕೊರೊನಾ ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಲಸಿಕೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ರೀತಿ ನೆರವು ನೀಡಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗುವುದು.
ಇದಲ್ಲದೆ ರಾಜ್ಯ ಸರ್ಕಾರಗಳು ನೇರವಾಗಿ ಲಸಿಕೆ ಉತ್ಪಾದನಾ ಸಂಸ್ಥೆಗಳಿಂದ ಲಸಿಕೆಗಳನ್ನು ಖರೀದಿ ಮಾಡಬಹುದು ಎಂದು ನಿರ್ಧರಿಸುವುದರಿಂದ ಇಂದಿನ ಸಭೆಯಲ್ಲಿ ಲಸಿಕೆ ಉತ್ಪಾದನಾ ಸಂಸ್ಥೆಗಳು ರಾಜ್ಯ ಸರ್ಕಾರಗಳ ಜೊತೆ ಮಾಡಿಕೊಳ್ಳಬೇಕಾದ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೊನಾ ಸೋಂಕು ಪೀಡಿತರು ಪತ್ತೆ ಆಗುತ್ತಿದ್ದಾರೆ. ಏಪ್ರಿಲ್ ೪ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದರು. ಏಪ್ರಿಲ್ ೧೪ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕೊರೊನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದರು. ಈಗ ದಿನ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆಯ ಕೊರತೆ ವ್ಯಾಪಕವಾಗಿ ಕಾಡುತ್ತಿದೆ.