ಲಸಿಕೆ ಕೊರತೆ: ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ದೂರು

ಕಲಬುರಗಿ.ಜೂ.04:ಭಾರತದಲ್ಲಿ ಕಳೆದ ಒಂದು ವರ್ಷದಿಂದಲೂ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಇಲ್ಲಿಯವರೆಗೆ ಉಚಿತವಾಗಿ ಲಸಿಕೆ ಕೊಡುವುದರಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರ ಮೂಲಕ ರಾಷ್ಟ್ರಪತಿಗಳಿಗೆ ಪ್ರತಿಭಟನಾ ಪತ್ರ ಸಲ್ಲಿಸಿದರು.

ಕೂಡಲೇ ಕೇಂದ್ರ ಸರ್ಕಾರವು ಪ್ರತಿ ದಿನ ಒಂದು ಕೋಟಿ ಕೋವಿಡ್ ಲಸಿಕೆಯನ್ನು ನೀಡಬೇಕು ಹಾಗೂ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆಯನ್ನು ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ದೇಶದ ಪ್ರತಿಯೊಂದು ಕುಟುಂಬದಲ್ಲಿಯೂ ಸಹ ಕೋವಿಡ್ ಭೀತಿ ಉಂಟಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೋವಿಡ್ ನಿಯಂತ್ರಣವು ಕೇವಲ ಲಸಿಕೆಯಿಂದ ಮಾತ್ರ ಸಾಧ್ಯ. ಆದಾಗ್ಯೂ, ಲಸಿಕೆ ಕೊಡಲು ಕೇಂದ್ರ ಸರ್ಕಾರವು ಇಲ್ಲಿಯವರೆಗೂ ಯಾವುದೇ ನಿರ್ಧಿಷ್ಟ ಕ್ರಮಗಳನ್ನು ಕೈಗೊಂಡಿಲ್ಲ. ಈಗಾಗಲೇ ಕಳೆದ 2020ರಲ್ಲಿಯೇ ವಿದೇಶಿ ರಾಷ್ಟ್ರಗಳು ಲಸಿಕೆ ಖರೀದಿ ಆರಂಭಿಸಿದವು. ಆದಾಗ್ಯೂ, ಕೇವಲ ಸಾರ್ವಜನಿಕರ ಪ್ರಚಾರಕ್ಕೆ ವಿಳಂಬವಾಗಿ ಕಳೆದ ಜನವರಿಯಲ್ಲಿ ಲಸಿಕೆ ಕುರಿತು ಕೇಂದ್ರ ಪ್ರಸ್ತಾಪಿಸಿತು. ಸುಮಾರು 140 ಕೋಟಿ ಜನರಿಗೆ ಇಲ್ಲಿಯವರೆಗೆ ಕೇಂದ್ರದಿಂದ ಕೇವಲ 39 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯಂತೆ ಕಳೆದ ಮೇ 31ರವರೆಗೆ 21.31 ಕೋಟಿ ಲಸಿಕೆಗಳಲ್ಲಿ ಕೇವಲ 4.45 ಕೋಟಿ ಎರಡು ಹಂತದ ಲಸಿಕೆಗಳನ್ನು ಸ್ವೀಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಪ್ರಮಾಣವನ್ನು ನೋಡಿದರೆ ಕಳೆದ 134 ದಿನಗಳಲ್ಲಿ ಕೇವಲ 3.17ರಷ್ಟು ಜನರಿಗೆ ಮಾತ್ರ ಲಸಿಕೆ ಕೊಡಲಾಗಿದೆ. ಹಿರಿಯ ನಾಗರಿಕರು ಕಳೆದ ಮೂರು ವರ್ಷಗಳಿಂದಲೂ ಲಸಿಕೆಗಾಗಿ ಕಾಯುತ್ತಿದ್ದಾರೆ. ಇನ್ನು ಎರಡನೇ ಅಲೆ ಮುಗಿದು, ಮೂರನೇ ಅಲೆಯ ಸೋಂಕಿನ ಭೀತಿಯು ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಯಾವ ಉತ್ತರವನ್ನು ದೇಶದ ಜನತೆಗೆ ಕೊಡುತ್ತದೆ? ಎಂದು ಪ್ರಶ್ನಿಸಿದರು.
ದೇಶದಲ್ಲಿ ಕೋವಿಡ್ ಸೋಂಕಿಗೆ ಜನತೆ ಒಳಗಾದ ಸಂದರ್ಭದಲ್ಲಿ ತನ್ನ ಜನರ ಹಿತಾಸಕ್ತಿಗಳನ್ನು ಬದಿಗೊತ್ತಿ ಮೋದಿ ಸರ್ಕಾರವು 6.63 ಕೋಟಿ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಿತು. ಇದರಿಂದ ಭಾರೀ ಪ್ರಮಾಣದಲ್ಲಿ ಲಸಿಕೆ ಕೊರತೆ ಉಂಟಾಗಲು ಕಾರಣವಾಯಿತು ಎಂದು ಅವರು ಆಕ್ರೋಶ ಹೊರಹಾಕಿದರು.
ಮೋದಿ ಸರ್ಕಾರವು ಉಚಿತ ಲಸಿಕೆ ಕೊಡುವ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಖಾತ್ರಿ ನೀಡಿಲ್ಲ. ಬದಲಾಗಿ ಒಂದು ಲಸಿಕೆಗೆ 150ರೂ., 300 ಹಾಗೂ 350ರೂ.ಗಳು ಹಿಡಿದು 600, 1,200 ರೂ. ಗಳವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿಗೊಳಿಸಿದ್ದು ಸರಿಯಲ್ಲ. ಖಾಸಗಿ ಆಸ್ಪತ್ರೆಗಳು ಪ್ರತಿ ಲಸಿಕೆಗೆ 1,500ರೂ.ಗಳನ್ನು ವಿಧಿಸುತ್ತಿವೆ. ಇನ್ನು ಎರಡು ಹಂತದ ಲಸಿಕೆಗೆ ದುಬಾರಿಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ ಬಿಜೆಪಿ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, 18 ವರ್ಷ ಮೇಲ್ಪಟ್ಟವರಿಗೂ ಸಹ ಕೋವಿಡ್ ಲಸಿಕೆಯನ್ನು ಸಮರ್ಪಕವಾಗಿ ವಿತರಿಸುವಂತೆ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್, ಉತ್ತರ ಕ್ಷೇತ್ರದ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಬಿ.ಆರ್. ಪಾಟೀಲ್, ಮುಖಂಡರಾದ ವಿಜಯಕುಮಾರ್ ಜಿ. ರಾಮಕೃಷ್ಣ, ಸುಭಾಷ್ ರಾಠೋಡ್, ಡಾ. ಕಿರಣಕುಮಾರ್ ದೇಶಮುಖ್, ಹಣಮಂತ್ ಭೂಸನೂರ್, ಶರಣಕುಮಾರ್ ಮೋದಿ, ಈರಣ್ಣ ಝಳಕಿ, ಸಂತೋಷ್ ಪಾಟೀಲ್ ದಣ್ಣೂರ್ ಮುಂತಾದವರು ಪಾಲ್ಗೊಂಡಿದ್ದರು.