ಲಸಿಕೆ ಕೊರತೆ `ಕೈ’ನಿಂದ ರಾಜ್ಯಪಾಲರಿಗೆ ದೂರು

ಬೆಂಗಳೂರು,ಜೂ.೪- ರಾಜ್ಯದಲ್ಲಿ ಲಸಿಕೆ ಕೊರತೆಯಾಗಿ ಬಡವರಿಗೆ ಲಸಿಕೆ ಸಿಗದಿರುವ ಬಗ್ಗೆ ರಾಜ್ಯಪಾಲರಿಗೆ ಕಾಂಗ್ರೆಸ್ ಪಕ್ಷ ಇಂದು ಸಂಜೆ ದೂರು ನೀಡಲಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆಯಾಗಿದೆ. ಬಡವರಿಗೆ ಲಸಿಕೆ ಸಿಗುತ್ತಿಲ್ಲ. ಹಣ ಇರುವವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲೂ ಲಸಿಕೆ ಕೊರತೆಯಾಗಿದೆ. ರಾಜ್ಯದಲ್ಲೂ ಸಮಸ್ಯೆ ಇದೆ. ಕಳೆದ ೨ ತಿಂಗಳಿನಿಂದ ಈ ಬಗ್ಗೆ ಧ್ವನಿ ಎತ್ತಿದ್ದರೂ ಸರ್ಕಾರ ಸಮಸ್ಯೆ ಬಗೆಹರಿಸಿಲ್ಲ. ಹಣ ಇಲ್ಲದವರಿಗೆ ಲಸಿಕೆ ಸಿಗುತ್ತಿಲ್ಲ ಎಂದು ದೂರಿದರು.
ಖಾಸಗಿ ಆಸ್ಪತ್ರೆಗಳಲ್ಲಿ ೧,೨೦೦ ರೂ.ಗಳಿಗೆ ಲಸಿಕೆ ನೀಡಲಾಗುತ್ತಿದೆ. ಬಡವರು ಎಲ್ಲಿ ಹೋಗಬೇಕು. ಸರ್ಕಾರ ಬಡವರಿಗೆ ಲಸಿಕೆ ನೀಡುವ ಕೆಲಸ ಮಾಡಬೇಕು ಎಂದರು.
ಸುಪ್ರೀಂಕೋರ್ಟ್ ಸಹ ಲಸಿಕೆ ವಿಚಾರದಲ್ಲಿ ಛೀಮಾರಿ ಹಾಕಿದೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ದೂರಿದರು.
ಲಸಿಕೆ ಪಡೆದರೆ ೨ ವರ್ಷದಲ್ಲಿ ಸಾಯುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಅಪಪ್ರಚಾರ ಮಾಡುವ ಮೂಲಕ ಜನ ಲಸಿಕೆಗೆ ಹಿಂದೇಟು ಹಾಕುವಂತೆ ಮಾಡಲಾಗುತ್ತಿದೆ. ಲಸಿಕೆ ಅಭಾವ ಮುಚ್ಚಿಕೊಳ್ಳಲು ಇಂತಹ ಅಪಪ್ರಚಾರವನ್ನು ಬಿಜೆಪಿ ಕಾರ್ಯಕರ್ತರು ನಡೆಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಸಕ ರಿಜ್ವಾನ್ ಅರ್ಷದ್ ಕಿಡಿಕಾರಿದರು. ಈ ಎಲ್ಲದರ ಬಗ್ಗೆಯೂ ರಾಜ್ಯಪಾಲರಿಗೆ ಸಂಜೆ ದೂರು ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.