ಲಸಿಕೆ ಕೊರತೆಯಿಲ್ಲ : ಸುಧಾಕರ್

ಬೆಂಗಳೂರು, ಏ. ೨೭- ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಜನ ಸಂಖ್ಯೆ ಆಧಾರದ ಮೇಲೆ ಲಸಿಕೆ ಪೂರೈಸುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೪ ದಿನಗಳ ಲಾಕ್‌ಡೌನ್ ಸಂದರ್ಭದಲ್ಲಿ ಲಸಿಕೆ ನೀಡುವಿಕೆ ಮುಂದುವರೆಯಲಿದೆ. ಲಸಿಕೆ ನೀಡುವಿಕೆ, ಕೊರೊನಾ ಸೋಂಕಿತರ ಚಿಕಿತ್ಸೆ ಎರಡೂ ಅಗತ್ಯ ಸೇವೆಯಡಿ ಬರುತ್ತದೆ. ಹಾಗಾಗಿ ಕಠಿಣ ನಿರ್ಬಂಧಗಳು ಜಾರಿಯಲ್ಲಿದ್ದರೂ ಲಸಿಕೆ ಪಡೆಯಲು ಯಾವುದೇ ತೊಂದರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಲಸಿಕೆ ನೀಡಿಕೆ ಇರುವುದಿಲ್ಲ ಎಂಬ ಅರ್ಥದಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಹರಿಬಿಟ್ಟಿದ್ದಾರೆ. ಇದು ಸರಿಯಲ್ಲ. ಲಸಿಕೆ ನೀಡಿಕೆ ಅಬಾಧಿತ ಎಂದರು.
೧೮ ವರ್ಷ ಮೇಲ್ಪಟ್ಟವರಿಗೆ ಮೇ ೧ ರಿಂದ ಲಸಿಕೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ೧೮ ವರ್ಷ ಮೇಲ್ಪಟ್ಟವರು ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಮುಂದೆ ಬರುವ ಕೊರೊನಾ ಮೂರನೇ ಅಲೆಯನ್ನು ತಡೆಯಲು ಲಸಿಕೆ ಒಂದೇ ನಮಗಿರುವ ಮದ್ದು. ಪ್ರತಿಯೊಬ್ಬರೂ ೨ ಡೋಸ್ ಲಸಿಕೆ ಪಡೆದರೆ ಮೂರನೇ ಅಲೆಯನ್ನು ತಡೆಯಲು ಸಾಧ್ಯ ಎಂದು ಸಚಿವ ಸುಧಾಕರ್ ಹೇಳಿದರು.
ಕೋಲಾರದಲ್ಲಿ ನಿನ್ನೆ ಆಮ್ಲಜನಕ ಕೊರತೆಯಿಂದ ಐವರು ಮೃತಪಟ್ಟಿಲ್ಲ. ಆಮ್ಲಜನಕ ಉಪಕರಣದ ಅಸಮರ್ಪಕ ನಿರ್ವಹಣೆಯಿಂದ ಈ ಸಾವಾಗಿದೆ. ಈ ಸಂಬಂಧ ಅಲ್ಲಿನ ಜಿಲ್ಲಾ ವೈದ್ಯಾಧಿಕಾರಿ ಮತ್ತು ಆರ್‌ಎಂ ಓ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ನಿನ್ನೆ ರಾತ್ರಿಯೇ ಕೋಲಾರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲವನ್ನು ವಿಚಾರಿಸಿದ್ದೇನೆ. ಆಕ್ಸಿಜನ್ ಪೈಪ್‌ನಲ್ಲಿದ್ದ ಕೊರತೆಯನ್ನು ಸರ್ಕಾರದ ಗಮನಕ್ಕೆ ತರದೇ ನಿರ್ಲಕ್ಷ್ಯ ವಹಿಸಿದ್ದು ಸಾವಿಗೆ ಕಾರಣವಾಗಿದೆ. ಹಾಗಾಗಿ ಸ್ಥಳದಲ್ಲೇ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.
ಬೋರಿಂಗ್ ಆಸ್ಪತ್ರೆಗೆ ಭೇಟಿ
ಸಚಿವ ಸುಧಾಕರ್ ಅವರು ಇಂದು ನಗರದ ಬೋರಿಂಗ್ ಆಸ್ಪತ್ರೆಗೂ ಭೇಟಿ ನೀಡಿ ಅಲ್ಲಿ ಕೋವಿಡ್ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ, ಊಟ, ಉಪಚಾರ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ರೋಗಿಗಳ ಜತೆಯೂ ಮಾತನಾಡಿ ವ್ಯವಸ್ಥೆ ಸರಿ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡರು.