ಲಸಿಕೆ ಕಾರ್ಯಕ್ಷಮತೆ ಟ್ರಯಲ್ ಅಂತು – ಇಂತು ಕೂಡಿ ಬಂತು


ನವದೆಹಲಿ/ ಹೈದರಾಬಾದ್ ,ಡಿ.೨೮- ಕೊರೊನಾ ಮತ್ತು ರೂಪಾಂತರ ಕೊರೊನಾ ಸೋಂಕಿನ ಭಯ, ಆತಂಕ ಸಮಸ್ಯೆ ದೇಶದ ನಾಲ್ಕು ರಾಜ್ಯಗಳಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ “ಡ್ರೈ ರನ್ ” ( ಪ್ರಾಯೋಗಿಕ ಪರೀಕ್ಷೆ) ಲಸಿಕೆ ಹಾಕುವ ಕಾರ್ಯ ಆರಂಭವಾಗಿದೆ.
ದೇಶದಲ್ಲಿ ೩೦ ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರ ಅದಕ್ಕೂ ಮುನ್ನ ಲಸಿಕೆ ಪ್ರಯೋಗ ಮತ್ತು ಅದರ ಪರಿಣಾಮ ಅರಿಯಲು ಆಂಧ್ರಪ್ರದೇಶ, ಪಂಜಾಬ್, ಗುಜರಾತ್ ಮತ್ತು ಅಸ್ಸಾಂನಲ್ಲಿ ಈ ಡ್ರೈ ರನ್ ಲಸಿಕೆ ಹಾಕುವ ಕಾರ್ಯ ಆರಂಭಿಸಿದೆ.
ಕೊರೊನಾ ಲಸಿಕೆಯಲ್ಲಿನ ವಿತರಣೆ ಲೋಪ ಮತ್ತು ಹಂಚಿಕೆಯ ಕಾರ್ಯಕ್ಷಮತೆ ಗುರುತಿಸುವ ಸಲುವಾಗಿ “ಡ್ರೈ ರನ್ ನಡೆಸಲಾಗುತ್ತಿದೆ. ಈ ನಾಲ್ಕು ರಾಜ್ಯಗಳಲ್ಲಿ ಪೂರ್ವ ಪರೀಕ್ಷೆಗೆ ೨೫ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಐದು ಹಂತಗಳಲ್ಲಿ ಅವರ ಮೇಲೆ ನಿಗಾ ಇರಿಸಲು ನಿರ್ಧರಿಸಲಾಗಿದೆ.
ಲಸಿಕೆಯ ಸಂಗ್ರಹಕ್ಕೆ ಶಿಥಲೀಕರಣ ವ್ಯವಸ್ಥೆ ಸಾರಿಗೆ ಹಾಗೂ ಮತ್ತಿತರ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಲಸಿಕೆ ಸಂದರ್ಭದಲ್ಲಿ ಸಮಸ್ಯೆ ಮತ್ತು ಲೋಪದೋಷಗಳನ್ನು ಪತ್ತೆಹಚ್ಚಲು ಟ್ರೈನ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫಲಾನುಭವಿಗಳ ನೊಂದಣಿ, ಕ್ರಮ ಸಂಖ್ಯೆ ಆಧಾರಿತ ಸಂದೇಶಗಳ ರವಾನೆ, ಲಸಿಕೆ ಹಂಚಿಕೆ, ಲಸಿಕೆ ಸಾಗಾಟ, ತುರ್ತು ಪರಿಸ್ಥಿತಿಗಳ ನಿರ್ವಹಣೆ ಸೇರಿ ಮೈಕ್ರೋ ಪ್ಲಾನಿಂಗ್‌ಗಳ ಪರಿಶೀಲನೆಯೂ ನಡೆಯಲಿದೆ. ಅಲ್ಲದೆ, ಲಸಿಕೆಯ ಹಂಚಿಕೆಯ ಪ್ರಾಯೋಗಿಕ ಪರೀಕ್ಷೆಯ ಮೂಲಕ ಕೋವಿಡ್ ಆಪ್‌ನ ಕಾರ್ಯ ವೈಖರಿಯು ಪರಿಶೀಲನೆಗೆ ಒಳಪಡಲಿದೆ.
ಲಸಿಕೆ ಹಾಕುವ ನಿಯೋಜಿತ ಸಿಬ್ಬಂದಿಗಳ ಕಾರ್ಯಕ್ಷಮತೆ ಈ ಡ್ರೈ ರನ್ ಮೂಲಕ ಪರಿಶೀಲನೆಗೆ ಒಳಪಡಲಿದೆ.
ಈ ಕೆಲಸಕ್ಕೆಂದು ಈವರೆಗೆ ಒಟ್ಟು ೬,೮೧,೬೦೪ ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ. ಹೀಗಾಗಿ ಸಿಬ್ಬಂದಿ ನಿರ್ವಹಣೆ ಬಗ್ಗೆಯೂ ಮೇಲ್ವಿಚಾರಣೆ ನಡೆಸಲಾಗುವುದು. ಆರೋಗ್ಯ ಇಲಾಖೆ ಇಂದಿನಿಂದ ಕೊರೋನಾ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಿದ್ದು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದಲ್ಲಿ ಕೃಷ್ಣ ಜಿಲ್ಲೆಯನ್ನು ಪ್ರಾಯೋಗಿಕ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಆಯುಕ್ತ ಕಟಮನೇನಿ ಭಾಸ್ಕರ್ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಸೋನಿತ್ ಪುರ್ ಮತ್ತು ನಲ್ಬಾರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಲಸಿಕೆ ಹಾಕುವ ೭ ಸಾವಿರ ಸಿಬ್ಬಂದಿಗೆ ಇದುವರೆಗೂ ದೇಶದಲ್ಲಿ ೨೩೬೦ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ.ಇದರಲ್ಲಿ ಅಧಿಕಾರಿಗಳು ವೈದ್ಯಕೀಯ ಸಿಬ್ಬಂದಿಗಳು ಮತ್ತು ಲಸಿಕೆ ಹಾಕುವ ಸಿಬ್ಬಂದಿಯು ಸೇರಿದ್ದಾರೆ
ತಿಂಗಳ ಆರಂಭದಲ್ಲಿ ಭಾರತ್ ಭಯೋಟೆಕ್ ಮತ್ತು ಸೆರಂ ಸಂಸ್ಥೆ ಲಸಿಕೆಯ ತುರ್ತು ಬಳಕೆಗೆ ಅನುವು ಮಾಡಿಕೊಡುವಂತೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಯಲಕ್ಕೆ ಅರ್ಜಿಸಲ್ಲಿದ್ದು ಈ ಪೈಕಿ ಸೆರಂ ಸಂಸ್ಥೆ ಯ ಲಸಿಕೆಗೆ ಅತಿ ಶೀಘ್ರದಲ್ಲಿ ಅನುಮತಿ ನೀಡುವ ಸಾದ್ಯತೆಗಳಿವೆ ಎನ್ನಲಾಗಿದೆ.
೧.೪೭ ಲಕ್ಷ ಮಂದಿ ಸಾವು
ದೇಶದಲ್ಲಿ ಕೊರೋನಾ ಸೋಂಕಿಗೆ ಒಂದು ಕೋಟಿಗೂ ಅಧಿಕ ಮಂದಿಗೆ ಭಾದಿತರಾಗಿದ್ದು ೧.೪೭ ಲಕ್ಷಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದಾರೆ.
ಸೋಂಕು ಮತ್ತು ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಈ ನಡುವೆ ನೈಜೀರಿಯಾ ಮತ್ತು ಲಂಡನ್?ನಲ್ಲಿ? ಮತ್ತೊಂದು ಹೊಸ ಬಗೆಯ ರೂಪಾಂತರಿ ಕೊರೋನಾ ಸೋಂಕು ಪತ್ತೆಯಾಗಿರುವುದು ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ.