ಲಸಿಕೆ : ಎಲ್ಲರಿಗೂ ಸಮಾನ ನಿಯಮ

ಬೆಂಗಳೂರು, ಜೂ.೧-ಕೋವಿಡ್ ಸಂಬಂಧ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಲಸಿಕಾ ಕೇಂದ್ರಗಳಲ್ಲಿ ಯಾರಿಗೂ ವಿಶೇಷ ಆದ್ಯತೆಗಳು ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕಾ ಕೇಂದ್ರದಲ್ಲಿ ಎಲ್ಲರಿಗೂ ಸರಿ ಸಮಾನ ಕಾನೂನು ಇದೆ. ಆದರೆ, ಕೆಲಕಡೆಗಳಲ್ಲಿ ಪ್ರಮುಖರಿಗೆ ಆದ್ಯತೆ ನೀಡುತ್ತಿರುವ ದೂರುಗಳು ಕೇಳಿಬಂದಿದ್ದು, ಈ ಸಂಬಂಧ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣ ಕಡಿಮೆ ಆಗುವಂತೆ ನೋಡಿಕೊಳ್ಳುವುದೇ ನಮ್ಮ ಆದ್ಯತೆ ಎಂದ ಅವರು, ತಳ ಮಟ್ಟದ ಅಧಿಕಾರಿಗಳು ಕೋವಿಡ್ ದೃಢಪಟ್ಟವರನ್ನು ಸಂಪರ್ಕಿಸಿ ಸೋಂಕು ಹರಡದಂತೆ ತಡೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎಂದರು.
ಕೋವಿಡ್ ಲಸಿಕೆ ಅಭಿಯಾನ ಹಾಗೂ ಕೋವಿಡ್ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆಯೂ ಅಷ್ಟೇ ಗಮನ ನೀಡುತ್ತಿದ್ದೇವೆ. ಇನ್ನು, ೪೫ ವರ್ಷ ಮೇಲ್ಪಟ್ಟವರಿಗೆ ಪ್ರತಿ ವಾರ್ಡ್‌ನಲ್ಲೂ ಲಸಿಕೆ ಹಾಕಲಾಗುತ್ತಿದೆ. ಈ ಸಲುವಾಗಿ ಕೆಲವು ವಾರ್ಡ್‌ಗಳಲ್ಲಿ ಒಂದು, ಇನ್ನು ಕೆಲವು ವಾರ್ಡ್‌ಗಳಲ್ಲಿ ಎರಡು ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.
ಲಸಿಕಾ ಕೇಂದ್ರಗಳಲ್ಲಿನ ಬೇಡಿಕೆ ಆಧರಿಸಿ ನಿತ್ಯವೂ ೧೦೦ ರಿಂದ ೧೫೦ ಮಂದಿಗೆ ಹಾಕಲು ಅಗತ್ಯ ಇರುವಷ್ಟು ಲಸಿಕೆ ಪೂರೈಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ನಿನ್ನೆ ಒಂದೇ ದಿನದಲ್ಲಿ ೯೦ ಸಾವಿರ ಲಸಿಕೆ ಹಂಚಿಕೆ ಮಾಡಲಾಗಿದೆ. ಈ ಪೈಕಿ ಸರ್ಕಾರದಡಿ ೪೦ ಸಾವಿರ ಹಾಗೂ ಖಾಸಗಿ ವಲಯದಿಂದ ೫೦ ಸಾವಿರ ಲಸಿಕೆ ನೀಡಲಾಗಿದೆ. ಈ ಬೇಡಿಕೆ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗೌರವ್ ಗುಪ್ತ ತಿಳಿಸಿದರು.