ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸೂಚನೆ

ನವದೆಹಲಿ,ಮಾ.೨೬- ಭಾರತದಲ್ಲಿ ಕೊರೊನಾ ಲಸಿಕೆ ಕೊರತೆ ಕಂಡು ಬಂದಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ ಭಾರತ್ ಬಯೋಟೆಕ್ ಕಂಪನಿಗೆ ಸೂಚನೆ ನೀಡಿ ಲಸಿಕೆ ಉತ್ಪಾದನಾ ಪ್ರಮಾಣ ಹೆಚ್ಚಿಸುವಂತೆ ತಿಳಿಸಿದೆ.
ದೇಶದಲ್ಲಿ ಲಸಿಕೆ ಅಭಿಯಾನ ವೇಗಗೊಳಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರ, ಏ. ೧ ರಿಂದ ೪೫ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಸಿದ್ಧತೆ ನಡೆಸುತ್ತಿರುವಂತೆಯೇ ಲಸಿಕೆ ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೂ ಕ್ರಮಕೈಗೊಂಡಿದೆ.
ದೇಶೀಯ ಲಸಿಕೆಗಳ ಸಾಮರ್ಥ್ಯ ವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿರುವ ಸರ್ಕಾರ, ವಿಶೇಷವಾಗಿ ಸಮಿತಿಯೊಂದನ್ನು ರಚಿಸಿ ಲಸಿಕೆ ಉತ್ಪಾದನೆ, ವಿತರಣೆ, ಸಾಮರ್ಥ್ಯ ಹಾಗೂ ಇನ್ನಿತರ ಲಸಿಕೆಗೆ ಸಂಬಂಧಿಸಿದ ವಿಷಯಗಳ ಮೇಲೆ ನಿಗಾ ಇಡಲು ಸೂಚಿಸಿದೆ.
ದೇಶೀಯವಾಗಿ ಕೋವಿ ಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳು ಅಂದಾಜು ೮.೭ ಕೋಟಿ ಡೋಸ್ ಹೊಂದಿದೆ ಎಂದು ತಿಳಿದು ಬಂದಿದ್ದು,ಆಕ್ಸ್‌ಫರ್ಡ್ ವಿವಿಯ ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ದೇಶದ ಹಲವು ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ, ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ಲಸಿಕೆ ಕೊರತೆ ಕಂಡು ಬಂದಿದೆ ಎನ್ನಲಾಗುತ್ತಿದೆ.
ಪ್ರಸ್ತುತ ೩೪ ಕೋಟಿ ಮಂದಿ ಲಸಿಕೆ ಪಡೆಯುವ ಉದ್ದೇಶಿತ ಫಲಾನುಭವಿಗಳಾಗಿದ್ದಾರೆ. ಮುಂಬರುವ ದಿನಗಳಲ್ಲಿ ಜನಸಂಖ್ಯೆಗನುಗುಣವಾಗಿ ದೇಶಕ್ಕೆ ಒಟ್ಟು ೬೪ ಕೋಟಿ ಡೋಸ್ ಲಸಿಕೆ ಅಗತ್ಯತೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.