ಲಸಿಕೆ ಉಚಿತ ಬಿಡೆನ್ ಭರವಸೆ

ವಾಷಿಂಗ್ಟನ್, ಅ. ೨೪- ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರೆ ದೇಶದ ಎಲ್ಲಾ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡೆನ್ ಭರವಸೆ ನೀಡಿದ್ದಾರೆ.
ಉಚಿತವಾಗಿ ಲಸಿಕೆ ವಿತರಿಸುವುದನ್ನು ರಾಷ್ಟ್ರೀಯ ಕಾರ್ಯತಂತ್ರವಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಸೋಂಕು ಲಸಿಕೆ ಸಿದ್ದವಾಗಿದ್ದು, ಕೆಲವೇ ದಿನಗಳಲ್ಲಿ ಅದನ್ನು ದೇಶದ ಜನರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ನಡುವೆಯೇ ಬಿಡೆನ್ ಅವರೂ ಕೂಡ ಉಚಿತವಾಗಿ ಲಸಿಕೆ ವಿತರಿಸುವ ವಾಗ್ದಾನ ಮಾಡಿದ್ದಾರೆ.
ಒಮ್ಮೆ ಲಸಿಕೆ ಸಿದ್ಧವಾಗುತ್ತಿದ್ದಂತೆ ಅದನ್ನು ದೇಶದ ಎಲ್ಲಾ ಜನರಿಗೆ ಉಚಿತವಾಗಿ ವಿತರಣೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ನವಂಬರ್ ೩ ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷ ಚುನಾವಣೆಗೆ ಇನ್ನು ಕೇವಲ ಹನ್ನೊಂದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಜನರ ಮನಗೆಲ್ಲಲು ನಾನಾ ಕಸರತ್ತು ನಡೆಸಲಾಗುತ್ತಿದೆ.
ಟ್ರಂಪ್ ವಿರುದ್ದ ವಾಗ್ದಾಳಿ:
ದೇಶದಲ್ಲಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೋ ಬೀಡೆನ್ ಅವರು ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದಲ್ಲಿ ಇದುವರೆಗೂ ೮೧ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಎರಡು ಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸೋಂಕು ನಿರ್ವಹಣೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇರುವುದು ಮತ್ತಷ್ಟು ಸೋಂಕು ಹೆಚ್ಚಾಗಲು ಕಾರಣ ಎಂದು ಆರೋಪಿಸಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ಸಾವು-ನೋವು ಕಂಡಿರಲಿಲ್ಲ. ಆರಂಭದಲ್ಲಿ ಸೋಂಕು ನಿರ್ವಹಣೆಗೆ ಟ್ರಂಪ್ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲ ಎಂದು ಅವರು ದೂರಿದ್ದಾರೆ.
ದೇಶದಲ್ಲಿ ಸೋಂಕು ಕಾಣಿಸಿಕೊಂಡು ಎಂಟು ತಿಂಗಳು ಕಳೆದಿದ್ದರೂ ಅದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.