ಲಸಿಕೆ ಅಭಿಯಾನದ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತ್ನಾಳರಿಂದ ಚಾಲನೆ

ವಿಜಯಪುರ, ಜೂ.3-ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಂಡಿದ್ದು, ಅದರಂತೆ ಇಂದು ವಾರ್ಡ ನಂ-29 ರ ರಾಜಾಜಿನಗರದ ಶ್ರೀ ಹನುಮಾನ ಗುಡಿ ಆವರಣದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಹಾಗೂ ಅವಧಿ ಮುಗಿದ ಎರಡನೇ ಡೋಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ, ನಗರದ ಎ.ಪಿ.ಎಂ.ಸಿ ಮರ್ಚಂಟ್ ಅಸೋಸಿಯೇಶನ್ ಮಂಗಲ ಕಾರ್ಯಾಲಯದಲ್ಲಿ ಫ್ರಂಟ್‍ಲೈನ್ ವರ್ಕರ್ಸ್‍ಗಳಿಗೆ (ಮುಂಚೂಣಿ ಕಾರ್ಯಕರ್ತರು) ಆಯೋಜಿಸಲಾದ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಚಾಲನೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಭಾಭವನದಲ್ಲಿ ಆಯೋಜಿಸಲಾದ ಕೋವಿಡ್-19 ಜಾಗೃತಿ ಹಾಗೂ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ನಗರದಲ್ಲಿ ಸತತವಾಗಿ ಎಪ್ರೀಲ್ 5 ರಿಂದ ವಜ್ರಹನುಮಾನ ನಗರದಿಂದ ಪ್ರಾರಂಭವಾದ ಈ ಲಸಿಕಾ ಅಭಿಯಾನ ಇಲ್ಲಿಯವರೆಗೆ ನಗರದ ಗಲ್ಲಿ ಗಲ್ಲಿ, ಮನೆ ಮನೆಗೆ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದರು.
ಇದರಿಂದ ನಗರದಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ಬಹಳ ಗಣನೀಯವಾಗಿ ಕಡಿಮೆಯಾಗುತ್ತ ಬರುತ್ತಿದೆ. ಲಸಿಕೆಯ ಬಗ್ಗೆ ಜನರಲ್ಲಿರುವ ಆತಂಕ ದೂರಮಾಡಲು ಸ್ವತಹ ಪ್ರಧಾನಿಗಳೆ ಲಸಿಕೆ ಪಡೆದುಕೊಂಡರು, ನಾನು ಲಸಿಕೆ ಪಡೆದುಕೊಂಡೆ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಜನರಿಗೆ ತಿಳಿಸುತ್ತ ಜಾಗೃತಿ ಮೂಡಿಸುವದರೊಂದಿಗೆ ಲಸಿಕಾ ಅಭಿಯಾನ ಮಾಡಿದ್ದು, ವಿಜಯಪುರ ನಗರದಲ್ಲಿ ಇಲ್ಲಿಯವರೆಗೆ ಶೇ. 72% ರಷ್ಟು ಜನ ಲಸಿಕೆ ಪಡೆದುಕೊಂಡಿದ್ದು ಕರ್ನಾಟಕದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಕರೋನ ಮೂರನೇ ಅಲೆ ಪ್ರಾರಂಭವಾಗುವದಕ್ಕಿಂತ ಮೊದಲು ವಿಜಯಪುರ ನಗರವನ್ನು ಶೇ 100% ಲಸಿಕೆ ಪಡೆದ ನಗರವನ್ನಾಗಿಸುವ ಗುರಿ ಇದೆ ಎಂದು ವಿವರಿಸಿದರು.
ಮಹಾನಗರ ಪಾಲಿಕೆಯಿಂದ 14ನೇ ಹಣಕಾಸು ನಿಧಿಯಲ್ಲಿ ನಗರದ ಡಾ. ಕರಿಗೌಡರ ಲ್ಯಾಬ್ ಹತ್ತಿರ ಮಂಜೂರಿಸಿದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, 15ನೇ ಹಣಕಾಸು ನಿಧಿಯಲ್ಲಿ ನಗರ ನೀರು ಸರಬರಾಜು ಮಂಡಳಿಗೆ ಮಂಜೂರಿಸಿದ ಒಟ್ಟು 100 ಲಕ್ಷ ರೂ ಮೊತ್ತದ ನಗರದ ತಾಸಬಾವಡಿ (ತಾಜಬೌಡಿ) ಭಾವಿಗೆ ಬೃಹತ್ ನೀರು ಶುದ್ಧೀಕರಣ ಘಟಕ ಹಾಗೂ ಸುತ್ತಲಿನ ಕಾಲನಿಗಳಿಗೆ ಶುದ್ಧ ನೀರು ಸರಬರಾಜು ಮಾಡುವ ಪೈಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಯಕ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಸವರಾಜ ಜಿರಾಳೆ, ಪಾಲಿಕೆ ಮಾಜಿ ಸದಸ್ಯರಾದ ಎಂ.ಎಸ್.ಕರಡಿ, ರಾಹುಲ್ ಜಾಧವ್, ಡಾ. ಬಾಲಕೃಷ್ಣ, ಡಾ.ಜನ್ನತ್, ಡಾ.ಜಯಶ್ರೀ ಮಸಳಿ, ಚಂದ್ರು ಚೌಧರಿ, ಸಂತೋಷ ತಳಕೇರಿ, ಶಿವರುದ್ರ ಬಾಗಲಕೋಟ, ಡಾ.ಮಹೇಶ ಕರಿಗೌಡರ, ಮಹೇಶ ಪಾಟೀಲ್, ವೇಣುಗೋಪಾಲ ಜೋಶಿ, ದತ್ತಾ ಗೊಲಾಂಡೆ, ಪ್ರಕಾಶ ಚವ್ಹಾಣ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ ಉಪಸ್ಥಿತರಿದ್ದರು.