
ರೋಮ್, ಜ.೧೦- ಯುರೋಪ್ ರಾಷ್ಟ್ರಗಳಲ್ಲೂ ಕೊರೊನಾ ವಿರುದ್ಧ ಸಮರ ಸಾರಿದ್ದು, ಪೋಪ್ ಫ್ರಾನ್ಸಿಸ್ ಮತ್ತು ಬ್ರಿಟನ್ ರಾಣಿ ಎಲಿಜೆಬೆತ್ ಜಾಗತಿಕ ಲಸಿಕೆ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
ಇದೇ ವೇಳೆ ಇಂಗ್ಲೆಂಡ್ನಲ್ಲಿ ಒಂದು ವರ್ಷದ ಹಿಂದೆ ಆರಂಭವಾದ ಕೊರೊನಾ ಸೋಂಕು ಇದೀಗ ಮೂರು ದಶಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್-೧೯ ದೃಢಪಟ್ಟಿದೆ.
ಜಗತ್ತಿನಾದ್ಯಂತ ಮಾರಕ ಕೊರೊನಾ ಸೋಂಕಿಗೆ ಇದುವರೆಗೂ ೧.೦೯ ದಶಲಕ್ಷ ಜನರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೆ ರೂಪಾಂತರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದು, ಹಲವು ರಾಷ್ಟ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಹಾಗೂ ನಿರ್ಬಂಧಗಳನ್ನು ಹೇರಲಾಗಿದೆ. ಕೆಲವು ರಾಷ್ಟ್ರಗಳಲ್ಲಿ ಸಾಮೂಹಿಕ ಲಸಿಕಾ ಆಂದೋಲನಕ್ಕೂ ಚಾಲನೆ ನೀಡಲಾಗಿದೆ.
ವ್ಯಾಟಿಕನ್ನಲ್ಲಿ ಮುಂದಿನ ವಾರದಿಂದ ಲಸಿಕೆ ಅಭಿಯಾನ ಆರಂಭವಾಗುತ್ತಿದ್ದು, ಈ ಅಭಿಯಾನದಲ್ಲಿ ತಾವು ಲಸಿಕೆ ಹಾಕಿಸಿಕೊಳ್ಳುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದ್ದು, ಇಟಲಿಯಲ್ಲಿ ಎಲ್ಲರೂ ಸೋಂಕು ತಡೆಗೆ ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದ್ದಾರೆ.
ಬ್ರಿಟನ್ ರಾಣಿ ೨ನೇ ಎಲಿಜೆಬೆತ್ ಮತ್ತು ಪತಿ ಪ್ರಿನ್ಸ್ ಫಿಲೀಪ್ ಈಗಾಗಲೇ ಕೋವಿಡ್-೧೯ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಬ್ರಿಟನ್ನಲ್ಲಿ ಇದುವರೆಗೆ ೧.೫ ದಶಲಕ್ಷ ಜನರಿಗೆ ಸೋಂಕು ತಗುಲಿದ್ದು, ವಯಸ್ಸಾದವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಆಧ್ಯತೆ ಮೇರೆಗೆ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ.
ಫೈಜರ್-ಬಯೋನ್ಟೆಕ್ ಮತ್ತು ಮಾಡೆರ್ನಾ, ರಷ್ಯಾ ಮತ್ತು ಚೀನಾದ ಲಸಿಕೆ ಬಳಕೆಗೆ ಹಲವು ರಾಷ್ಟ್ರಗಳು ಅನುಮೋದನೆ ನೀಡಿವೆ.