ಲಸಿಕೆಯಿಂದ ಹೊಸ ಭರವಸೆ: ಗುಬ್ಬಿಶೆಟ್ಟರ


ಲಕ್ಷ್ಮೇಶ್ವರ,ಜ.9- ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್-19 ಲಸಿಕೆ ಹಾಕುವ ಪ್ರಯೋಗಾರ್ಥಕ ಅಣಕು ಪರೀಕ್ಷೆಗೆ ತಹಶೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಳೆದ ಒಂದು ವರ್ಷದಿಂದ ಕೊರೊನಾ ವೈರಸ್‍ನ ಹಾವಳಿಯಿಂದಾಗಿ ಜನರು ಭಯಗೊಂಡಿದ್ದಾರೆ. ಆದರೆ ಇದೀಗ ಅದಕ್ಕೆ ಲಸಿಕೆ ಬಂದಿದ್ದು ಹೊಸ ಭರವಸೆ ಮೂಡಿಸಿದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಸುಭಾಷ ದಾಯಗೊಂಡ ಮತ್ತು ಲಕ್ಷ್ಮೇಶ್ವರ ಆಸ್ಪತ್ರೆ ವೈದ್ಯಾಧಿಕಾರಿ ಗಿರೀಶ ಮರಡ್ಡಿ ಮಾತನಾಡಿ ಲಸಿಕೆಯನ್ನು ವ್ಯಕ್ತಿಗಳಿಗೆ ಹಾಕುವವರೆಗೆÀ ಹಿಡಿದು ಪ್ರತಿಯೊಂದು ಹಂತವನ್ನು ಪರೀಕ್ಷೆ ನಡೆಸಲಾಗುವುದು. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಸೇರಿದಂತೆ ಎರಡೂ ತಾಲ್ಲೂಕುಗಳ ಪೈಕಿ ಪ್ರಥಮವಾಗಿ 600 ಜನರಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿದೆ. ಲಕ್ಷ್ಮೇಶ್ವರದ ಆಸ್ಪತ್ರೆಯಲ್ಲಿ ಇದಕ್ಕಾಗಿ ಲಸಿಕೆ ಹಾಕಿಸಿಕೊಳ್ಳವರರಿಗಾಗಿ ನೋಂದಣಿ ಕೊಠಡಿ, ಲಸಿಕೆ ಹಾಕುವ ಕೊಠಡಿ ನಂತರ ಲಸಿಕೆ ಹಾಕಿಸಿಕೊಂಡವರ ಪರಿವೀಕ್ಷಣಾ ಕೊಠಡಿ ಹೀಗೆ ಒಟ್ಟು ಮೂರು ಕೊಠಡಿಗಳನ್ನು ಸಿದ್ಧಗೊಳಿಸಲಾಗಿದೆ. ಮೊದಲು 25 ಜನರಿಗೆ ಲಸಿಕೆ ಹಾಕಲಾಗುವುದು. ನಂತರ ಹಂತ ಹಂತವಾಗಿ ಎಲ್ಲರಿಗೂ ಹಾಕಲಾಗುವುದು ಎಂದ ಅವರು 18 ರಿಂದ 50 ವರ್ಷದೊಳಗಿನ ವ್ಯಕ್ತಿಗಳಿಗೆ ಮಾತ್ರ ಲಸಿಕೆ ಹಾಕಲು ನಿರ್ಧರಿಸಲಾಗಿದ್ದು ಮಕ್ಕಳು ಮತ್ತು ಗರ್ಭಿಣಿಯರಿಗೆ ಹಾಕುವುದಿಲ್ಲ. ಲಸಿಕೆ ಪಡೆದ ವ್ಯಕ್ತಿ ಅಂದಾಜು 30 ನಿಮಿಷಗಳವರೆಗೆ ಪರಿವೀಕ್ಷಣಾ ಕೊಠಡಿಯಲ್ಲಿ ಇರಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಹಿರೇಮಠ ಹಾಗೂ ಸಿಬ್ಬಂದಿ ಇದ್ದರು.