ಲಸಿಕೆಗೆ ಹಣ : ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯ ವಜಾ


ಬೆಂಗಳೂರು, ಜೂ.೧- ಕೋವಿಡ್ ಲಸಿಕೆಗಳನ್ನು ಹಣ ಪಡೆದು ಅಕ್ರಮವಾಗಿ ಹಾಕುತ್ತಿದ್ದ ಆರೋಪ ಹಿನ್ನೆಲೆ ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯನೋರ್ವನನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.
ನಗರದ ಎನ್.ಎಸ್ ಪಾಳ್ಯದ ಬಿಬಿಎಂಪಿ ಆರೋಗ್ಯ ಕೇಂದ್ರ ವೈದ್ಯ ವಜಾಗೊಂಡಿದ್ದು, ಈತ ಮೆಡಿಕಲ್ ಅಂಗಡಿ ಮಾಲೀಕನೊಂದಿಗೆ ಜೊತೆಗೂಡಿ ಲಸಿಕೆಗಳನ್ನು ಹಣ ಪಡೆದು ಸಾರ್ವಜನಿಕರಿಗೆ ನೀಡುತ್ತಿದ್ದ ಎನ್ನುವ ದೂರುಗಳು ಕೇಳಿಬಂದಿದೆ.
ಸಾರ್ವಜನಿಕರಿಂದ ಹಣ ಪಡೆದು ಫ್ರೆಂಟ್ ಲೈನ್ ವಾರಿಯರ್ ಎಂದು ಹೇಳಿ ವ್ಯಾಕ್ಸಿನ್ ನೀಡುತ್ತಿದ್ದರು.
ಮೊದಲಿಗೆ ಮೆಡಿಕಲ್ ಅಂಗಡಿ ಮಾಲೀಕ
ತನ್ನ ಅಂಗಡಿಗೆ ಬರುವ ಜನರಿಗೆ ಲಸಿಕೆ ಹಾಕಿಸಿಕೊಳ್ಳಬೇಕೆ ಎಂದು ಹೇಳುತ್ತಿದ್ದ. ಆನಂತರ ಹೆಚ್ಚು ಹಣ ಪಡೆದು ಅವರನ್ನು ಆರೋಗ್ಯ ಕೇಂದ್ರಕ್ಕೆ ಕಳಿಸುತ್ತಿದ್ದ.
ಬಳಿಕ, ಆರೋಗ್ಯ ಕೇಂದ್ರದಲ್ಲಿ ಮೆಡಿಕಲ್ ಅಂಗಡಿ ಮೂಲಕ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತಿತ್ತು. ಅಲ್ಲದೆ, ಇವರು ಯಾರೂ ಸಾಲಿನಲ್ಲಿ ನಿಲ್ಲುವ ಅಗತ್ಯವೇ ಇರಲಿಲ್ಲ. ನೇರವಾಗಿ ಹೋಗಿ ಕೊವಿಡ್ ಲಸಿಕೆ ಪಡೆಯುತ್ತಿದ್ದರು. ಈ ಬಗ್ಗೆ ಬಿಬಿಎಂಪಿ ಹಾಗೂ ಶಾಸಕರ ಕಚೇರಿಗೆ ದೂರು ನೀಡಿದ್ದಾರೆ.
ಮೇಲ್ನೋಟಕ್ಕೆ ಮಾಹಿತಿ ಸಂಗ್ರಹಿಸಿದ ಹಿರಿಯ ಅಧಿಕಾರಿಗಳು, ಆರೋಗ್ಯ ಕೇಂದ್ರದ ವೈದ್ಯನನ್ನು ವಜಾಗೊಳಿಸಲಾಗಿದೆ. ಇವರಿಬ್ಬರೂ ಸೇರಿ ನೂರಾರು ಜನರಿಗೆ ಲಸಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.