ಲಸಿಕೆಗೆ ಶುಲ್ಕ ಖಂಡನೀಯ


ಧಾರವಾಡ,ಜೂ.3: ಸರಕಾರವು ಸಾರ್ವಜನಿಕರಿಗೆ ಕೋವಿಶೀಲ್ಡ್ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದರೂ ಖಾಸಗಿ ಆಸ್ಪತ್ರೆಯವರು ಯಾರ ಆದೇಶದ ಮೇಲೆ ಹೆಚ್ಚಿನ ಶುಲ್ಕದೊಂದಿಗೆ ಲಸಿಕೆಯನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಾಬರ್ಟ ದದ್ದಾಪುರಿ, ಹು-ಧಾ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ ಹಾಗೂ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಆನಂದ ಮುಶಣ್ಣವರ ಜಂಟಿಯಾಗಿ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೆಲಸವಿಲ್ಲದೆ ತುತ್ತು ಅನ್ನಕ್ಕೂ ಗತಿಯಿಲ್ಲದಂತೆ ತಿರುಗುತ್ತಿರುವ ಅಸಂಖ್ಯಾತ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಲಾಕ್‍ಡೌನ್‍ನಿಂದ ಕಂಗೆಟ್ಟಿರುವ ಲಕ್ಷಾಂತರ ಬೀದಿಬದಿಯ ವ್ಯಾಪಾರಸ್ಥರು ಮತ್ತು ವಿದ್ಯಾಭ್ಯಾಸದಲ್ಲಿ ತೊಡಗಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಯುವಜನರು, ಬಡವರು ಸರಕಾರದ ಈ ನೀತಿಯಿಂದ ಕಂಗೆಟ್ಟಿದ್ದಾರೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರಕಾರವು ಒಂದು ಕಡೆ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಇಲ್ಲ ಎಂದು ಬೋರ್ಡನ್ನು ಹಾಕಿಸಿ ಅವರೇ ಈ ರೀತಿ ಖಾಸಗಿಯವರಿಂದ ಅಕ್ರಮ ಒಡಂಬಡಿಕೆಯನ್ನು ಮಾಡಿಕೊಂಡು ಲಸಿಕೆಗೆ ದುಬಾರಿ ಹಣವನ್ನು ನಿಗದಿ ಮಾಡಿ ಸಾರ್ವಜನಿಕರನ್ನು ಕೊಳ್ಳೆಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಉಚಿತ ಲಸಿಕೆಗಳನ್ನು ನೀಡಬೇಕು. ಯಾವುದೇ ಖಾಸಗಿ ಆಸ್ಪತ್ರೆಯವರಿಗೆ ಲಸಿಕೆಗೆ ಆಸ್ಪದ ನೀಡಿ ಸಾರ್ವಜನಿಕರಿಂದ ಲಸಿಕೆಗೆ ಹಣವನ್ನು ಪಡೆದರೆ ಸಂವಿಧಾನ ವಿರೋಧಿಯಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.