ಲಸಿಕೆಗೆ ದುಬಾರಿ ದರ ನಿಗದಿ ಸರಿಯಲ್ಲ-ನೀರಲಕೇರಿ

ಧಾರವಾಡ ಜೂ.10: ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಕೋವಿಡ್ ಲಸಿಕೆಗಳಿಗೆ ದುಬಾರಿ ದರ ನಿಗದಿ ಮಾಡಿರುವ ಕೇಂದ್ರ ಸರಕಾರದ ತೀರ್ಮಾನವನ್ನು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಖಂಡಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಗುವ ಉಚಿತ ಲಸಿಕೆಯನ್ನು ಪಡೆದು ತಮ್ಮ ಆಸ್ಪತ್ರೆಗಳಲ್ಲಿ ನೀಡುವ ದುರುಪಯೋಗ ಆಗದಿರದು. ದರ ನಿಗದಿ ಮಾಡಿ ಜನರಿಂದ ದೋಚುವುದು ಖಂಡನೀಯ. ಈ ಹಿಂದೆ ಎಲ್ಲರಿಗೂ ಉಚಿತ ಲಸಿಕೆ ಎಂದಿದ್ದ ಸರಕಾರ, ಈಗ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಕೋವಿಡ್ ಲಸಿಕೆಗಳಿಗೆ ದರ ನಿಗದಿ ಮಾಡಿದ್ದು ಏಕೆ? ಹಾಗಾದರೆ ಕಳೆದ ಬಜೆಟ್‍ನಲ್ಲಿ ಉಚಿತ ಲಸಿಕಾ ಅಭಿಯಾನಕ್ಕೆ ಮೀಸಲಿಟ್ಟ 35 ಸಾವಿರ ಕೋಟಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರಕಾರಗಳಿಗೆ ಕೇಂದ್ರ ಲಸಿಕೆ ಹಂಚಿಕೆ ಮಾಡುವುದಾದರೆ ಯಾವ ರಾಜ್ಯಕ್ಕೆ, ಎಷ್ಟು ಹಾಗೂ ಯಾವತ್ತು ವ್ಯಾಕ್ಸೀನ್ ಸಿಗಬೇಕು ಎನ್ನುವುದರ ಮಾನದಂಡ ಯಾವುದು? ಆದ್ಯತೆಯನ್ನು ಹೇಗೆ ನಿರ್ಧರಿಸಲಾಗುತ್ತದೆ. ಪ್ರಕರಣಗಳು ಹೆಚ್ಚಿರುವ ರಾಜ್ಯಕ್ಕೆ ಆದ್ಯತೆಯೋ ಅಥವಾ ಚುನಾವಣೆ ಇರುವ ರಾಜ್ಯಕ್ಕೋ ಎಂಬುದನ್ನು ತಿಳಿಸಬೇಕು.
18-45 ವರುಷದವರಿಗೆ ಎಲ್ಲೆಡೆ ವ್ಯಾಕ್ಸಿನ್ ಸಿಗಲಿದೆ ಎಂದು ಹೇಳಿದ್ದ ಸರಕಾರದ 35000 ಕೋ.ರೂ.ಗಳ ಬಗ್ಗೆ ಸುಪ್ರಿಂಕೋಟ್9 ಲೆಕ್ಕ ಕೇಳಿದ ಪರಿಣಾಮ ಕೇಂದ್ರ ಸರಕಾರ ಈಗ ರಾಜ್ಯಗಳಿಗೆ ಕೇಂದ್ರವೇ ವ್ಯಾಕ್ಸಿನ್ ಸರಬರಾಜು ಮಾಡಲಿದೆ ಎಂದು ಹೇಳುತ್ತಿದೆ.ಇನ್ನೊಂದೆಡೆ ಗಟ್ಟಿ ಸರ್ಕಾರ, ಸಮರ್ಥ ನಾಯಕ ಎಂದುಕೊಳ್ಳುವ ಸರಕಾರ ವ್ಯಾಕ್ಸಿನ್ ಬಗ್ಗೆ ಒಂದು ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ಇದು ಹೇಗೆ ಸಮರ್ಥ ನಾಯಕತ್ವ? ಗಟ್ಟಿ ಸರ್ಕಾರ ಇದೇನಾ? ಎಂದು ನೀರಲಕೆರಿ ಪ್ರಶ್ನಿಸಿದ್ದಾರೆ.