ಲಸಿಕೆಗಾಗಿ ಸರದಿ ಸಾಲಿನಲ್ಲಿ ನಿಂತ ಜನರು

ಬೆಂಗಳೂರು, ನ.೩೦- ವಿಶ್ವದ ಹಲವೆಡೆ ಒಮಿಕ್ರಾನ್ ಹೊಸ ರೂಪಾಂತರಿ ತಳಿ ಸಾಕಷ್ಟು ಆತಂಕವುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಜನರು ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ.
ನಗರದ ಟೌನ್‌ಹಾಲ್ ಬಳಿ ಇರುವ ಯಲ್ಲಮ್ಮ ದಾಸಪ್ಪ ಆಸ್ಪತ್ರೆ ಬಳಿ ಲಸಿಕೆ ಪಡೆಯಲು ಉದ್ದನೆಯ ಸಾಲಿನಲ್ಲಿ ಜನರು ನಿಂತಿದ್ದ ದೃಶ್ಯ ಕಂಡು ಬಂದಿತು.
ಒಮಿಕ್ರಾನ್ ರೂಪಾಂತರಿ ತಳಿ ಕಾಣಿಸಿಕೊಳ್ಳುವ ಮುನ್ನ ಜನರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಈಗ ರೂಪಾಂತರಿ ತಳಿ ಭಾರಿ ಸದ್ದು ಮಾಡುತ್ತಿರುವಾಗಲೇ ಭಯಭಿತರಾದ ಜನರು ಬೆಂಗಳೂರು ನಗರದ ವಿವಿಧ ಲಸಿಕಾ ಕೇಂದ್ರಗಳಿಗೆ ದೌಡಾಯಿಸುತ್ತಿದ್ದಾರೆ. ಇದರಿಂದಾಗಿ ಜನಸಂದಣಿ ಕಂಡು ಬಂದಿದೆ.
ಕೆಲವರು ೧ ಡೋಸ್ ಲಸಿಕೆ ಪಡೆದು ೨ನೇ ಡೋಸ್ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದರು. ಇನ್ನೂ ಕೆಲವರು ಲಸಿಕೆ ಹಾಕಿಸಿಕೊಂಡಿರಲಿಲ್ಲ. ಈಗ ಒಮಿಕ್ರಾನ್ ರೂಪಾಂತರಿ ಭೀತಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನರು ಲಸಿಕೆಯತ್ತ ಮುಖ ಮಾಡಿದ್ದಾರೆ.