ಲಸಿಕೆಕಾರ್ಯ ಪೂರ್ಣಗೊಳಿಸಲು ಸೂಚನೆ


ಹಾವೇರಿ, ಜ.14: ಜಿಲ್ಲೆಯಲ್ಲಿ ಬಾಕಿ ಉಳಿದಿರುವ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹಾಗೂ ಎರಡನೇ ಡೋಸ್ ಬಾಕಿ ಉಳಿದಿರುವ ಜನರಿಗೆ ವೇಗವಾಗಿ ಕೋವಿಡ್ ಲಸಿಕೆ ಹಾಕುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಾಕೀತು ಮಾಡಿದರು.
ತಾಲೂಕಾ ಆಡತಗಳೊಂದಿಗೆ ವರ್ಚುವಲ್ ಸಭೆಯ ಮೂಲಕ ತಾಲೂಕಾವಾರು ಕೋವಿಡ್ ಲಸಿಕಾ ಪ್ರಗತಿಯ ಮಾಹಿತಿ ಪಡೆದ ಅವರು, ರಾಜ್ಯದ ಸರಾಸರಿಗಿಂತ ಜಿಲ್ಲೆಯಲ್ಲಿ ಲಸಿಕಾ ಪ್ರಮಾಣ ಕಡಿಮೆಯಾಗಬಾರದು. ಭಾನುವಾರ ಹೊರತುಪಡಿಸಿ ವಾರಾಂತ್ಯದ ಕಫ್ರ್ಯೂ ಸಂದರ್ಭದಲ್ಲೂ ಲಸಿಕೆ ನೀಡುವ ಕಾರ್ಯಕ್ರಮ ನಿಲ್ಲಬಾರದು. ನಿತ್ಯ ಕನಿಷ್ಠ 20 ಸಾವಿರ ಜನರಿಗೆ ಲಸಿಕೆ ನೀಡಿ ನಿಗಧಿತ ಕಾಲಮಿತಿಯೊಳಗೆ ಲಸಿಕೆ ನೀಡುವ ಕಾರ್ಯಕ್ರಮ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮತ್ತು ನಿಗಧಿತ ಗುರಿಯಂತೆ ಮೊದಲ ಡೋಸ್ ಹಾಗೂ ಎರಡನೇ ಡೋಸ್ ಬಾಕಿ ಉಳಿದಿರುವ ಲಸಿಕೆ ಕಾರ್ಯಕ್ರಮವನ್ನು ಏಕ ಕಾಲದಲ್ಲಿ ಮುಂದುವರಿಸಬೇಕು. ಯಾವುದೇ ವರ್ಗದವರಿಗೆ ಲಸಿಕೆ ನೀಡುವುದು ಸ್ಥಗಿತಗೊಳಿಸಬಾರದು. ಲಸಿಕೆಗೆ ವೇಗ ನೀಡಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಕ್ರಮವಹಿಸಿ ಎಂದು ಸೂಚನೆ ನೀಡಿದರು.
ಶಾಲಾಯಿಂದ ಯಾವ ಮಕ್ಕಳು ಹೊರಗುಳಿಯಬಾರದು. ಎಲ್ಲ ಮಕ್ಕಳು ಕಲಿಕೆಯಿಂದ ದೂರ ಉಳಿಯಬಾರದು. ಈ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತನ್ನಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದ ನಿಯಮಾವಳಿಯಂತೆ ಯಾವುದೇ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದರೆ ಆ ಶಾಲೆಗೆ ರಜೆ ನೀಡುವ ಕುರಿತಂತೆ ತಾಲೂಕಾ ಶಿಕ್ಷಣಾಧಿಕಾರಿಗಳು ಕ್ರಮವಹಿಸಬೇಕು. ಈ ಕುರಿತಂತೆ ಶಿಫಾರಸ್ಸು ಮಾಡಬೇಕು. ಕೋವಿಡ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜ್‍ಗಳ ಮೇಲೆ ಹೆಚ್ಚಿನ ನಿಗಾವಹಿಸಿ ಆಗಾಗೆ ಮಾಹಿತಿ ಪಡೆದುಕೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
15 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 83,723 ಮಕ್ಕಳ ಪೈಕಿ 59,249 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಶೇ.70.76 ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ರಾಣೇಬೆನ್ನೂರಿನಲ್ಲಿ ಶೇ.75.36, ಹಾನಗಲ್ ತಾಲೂಕಿನಲ್ಲಿ ಶೇ.71.16, ಶಿಗ್ಗಾಂವ ತಾಲೂಕಿನಲ್ಲಿ ಶೇ.70.95, ಬ್ಯಾಡಗಿ ತಾಲೂಕಿನಲ್ಲಿ ಶೇ.70.65, ಸವಣೂರ ತಾಲೂಕಿನಲ್ಲಿ ಶೇ.70.32, ಹಿರೇಕೆರೂರ ತಾಲೂಕಿನಲ್ಲಿ ಶೇ.69.83 ಹಾಗೂ ಹಾವೇರಿ ತಾಲೂಕಿನಲ್ಲಿ ಶೇ.66.43 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ವರ್ಚುವಲ್ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ತಾಲೂಕಾ ಆರೋಗ್ಯಾಧಿಕಾರಿಗಳು, ತಹಶೀಲ್ದಾರಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.