ಲಸಿಕಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ, ಅಧಿಕಾರಿಗಳ ಭೇಟಿ

ಚಾಮರಾಜನಗರ, ಏ.16- ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಪರಿಣಾಮಕಾರಿಯಾಗಿ ವ್ಯಾಪಿಸದಂತೆ ತಡೆಯುವ ಸಲುವಾಗಿ ಪಾಲಿಸ ಬೇಕಿರುವ ಮುಂಜಾಗ್ರತಾ ಕ್ರಮಗಳ ಅನುಷ್ಠಾನಕ್ಕಾಗಿ ಅಧಿಕಾರಿಗಳು, ವೈದ್ಯಾಧಿಕಾರಿಗಳು ವ್ಯಾಪಕವಾಗಿ ಆಸ್ಪತ್ರೆ, ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ಸೋಂಕು ತಡೆಗಟ್ಟಲು ಕೈಗೊಂಡಿರುವ ಅಗತ್ಯ ಕ್ರಮಗಳು ಹಾಗೂ ಲಸಿಕಾ ಕಾರ್ಯದ ಪ್ರಗತಿ ಸಂಬಂಧ ನಡೆದ ವೈದ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಹರಡದಂತೆ ನಿಯಂತ್ರಿಸುವ ಉದ್ದೇಶಕ್ಕಾಗಿ ಮಾಡಲಾಗುತ್ತಿರುವ ಪರೀಕ್ಷೆ, ಸಂಪರ್ಕ ಪತ್ತೆ ಹಾಗೂ ಚಿಕಿತ್ಸೆ ಔಷಧೋಪಚಾರಗಳ ಬಗ್ಗೆ ಮತ್ತಷ್ಟು ಸೂಕ್ಷ್ಮ ಯೋಜನೆಗಳನ್ನು ಹಾಕಿಕೊಂಡು ಪ್ರತಿನಿತ್ಯ ಇದರ ಅನುಷ್ಠಾನಕ್ಕಾಗಿ ವಿಶೇಷ ಗಮನ ನೀಡಬೇಕು.
ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಪ್ರತಿದಿನ ಆರಂಭದಲ್ಲಿಯೇ ಕೋವಿಡ್ ತಡೆಯುವ ಯೋಜನೆಗಳ ಸಂಬಂಧ ಚರ್ಚಿಸಿ ಸೋಂಕು ತಡೆಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಖಾಸಗಿ ಆಸ್ಪತ್ರೆ, ಗಂಟಲು ಮಾದರಿ ದ್ರವ ಸಂಗ್ರಹಣಾ ಕೇಂದ್ರಗಳಲ್ಲಿ ಸಂಗ್ರಹಣಾ ಕಾರ್ಯವನ್ನು ಹೆಚ್ಚಳ ಮಾಡಬೇಕು. ಪರೀಕ್ಷಾ ಸಂಖ್ಯೆಯನ್ನು ನಿಗದಿಪಡಿಸಿರುವ ಗುರಿ ಅನುಸಾರ ಮಾಡಬೇಕು. ಸೋಂಕಿತರ ಸಂಪರ್ಕ ಪತ್ತೆ ಕಾರ್ಯವು ಮಾರ್ಗಸೂಚಿ ಪ್ರಕಾರ ನಡೆಯಬೇಕು.
ವಿಳಂಬಕ್ಕೆ ಅವಕಾಶವಾಗದಂತೆ ಕೋವಿಡ್ ತಡೆ ಸಂಬಂಧಿ ಎಲ್ಲಾ ಕಾರ್ಯಗಳು ಆಗುವಂತೆ ನೋಡಿಕೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ಅಥವಾ ಲೋಪಗಳಿಗೆ ಆಸ್ಪದ ನೀಡಬಾರದೆಂದು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಕ್ಕೆ ಕೊರತೆಯಾಗಬಾರದು. ನಗರದಲ್ಲಿ ಹೆಚ್ಚುವರಿಯಾಗಿ ತೆರೆಯಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುವ ಕೆಲಸ ಪೂರ್ಣವಾಗಬೇಕು.
ಆಯಾ ತಾಲೂಕುಗಳಲ್ಲಿ ಈ ಹಿಂದೆ ತೆರೆಯಲಾಗಿದ್ದ ಕೋವಿಡ್ ಕೇರ್ ಕೇಂದ್ರಗಳನ್ನು ಸಜ್ಜಾಗಿಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ. ಮಾಸ್ಕ್ ಧರಿಸಬೇಕು. ಜನಸಂದಣಿ ಸ್ಥಳಗಳು, ಬಸ್ ನಿಲ್ದಾಣ, ಹೋಟೆಲ್, ರೆಸ್ಟೋರೆಂಟ್, ಅಂಗಡಿ ಮುಂಗಟ್ಟುಗಳಲ್ಲಿ ಮಾಸ್ಕ್ ಧರಿಸದೇ ಇರುವವರ ವಿರುದ್ದ ದಂಡ ವಿಧಿಸಬೇಕು.
ವ್ಯಾಪಾರ ವಹಿವಾಟು ಸ್ಥಳಗಳಲ್ಲಿ ಅಂಗಡಿ, ಉದ್ಯಮ ಮಾಲೀಕರು ಮಾಸ್ಕ್ ಧರಿಸದೆ ಬರುವ ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಲ್ಲಿ ಸಂಬಂಧ ಪಟ್ಟ ಅಂಗಡಿ ಮಾಲೀಕರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.