ಲಸಿಕಾ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಸಾಧನೆಗೆ ಸೂಚನೆ

ಚಾಮರಾಜನಗರ, ಮೇ.31- ಕೋವಿಡ್ ರೋಗ ನಿರೋಧಕ ಲಸಿಕೆಯನ್ನು 18ವರ್ಷ ಮೇಲ್ಪಟ್ಟು ಗುರುತಿಸಲಾಗಿರುವ ಎಲ್ಲಾ ಆದ್ಯತಾ ವಲಯಗಳು, ವಿಶೇಷ ಗುಂಪಿನ ಫಲಾನುಭವಿಗಳು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಸಮರ್ಪಕವಾಗಿ ನೀಡುವ ಮೂಲಕ ನಿಗದಿತ ಗುರಿಯನ್ನು ಪ್ರತಿನಿತ್ಯ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಆರ್ಹರೆಲ್ಲರಿಗೂ ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ಅತ್ಯಂತ ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಈಗಾಗಲೇ ವಿಶೇಷ ಗುಂಪಿನ ಫಲಾನುಭವಿಗಳು ಆದ್ಯತಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ದುರ್ಬಲ ವರ್ಗಗಳಡಿ ಬರುವ ಮುಂಚೂಣಿ ಕಾರ್ಯಕರ್ತರಿಗೆ ಒತ್ತು ನೀಡಿ ಲಸಿಕೆ ನೀಡಬೇಕಿದೆ. ಇದಕ್ಕಾಗಿ ಪ್ರತಿ ವರ್ಗದವರಿಗೆ ಲಸಿಕೆ ಪಡೆಯಲು ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಯಾರೊಬ್ಬರು ಲಸಿಕೆ ಪಡೆಯುವುದರಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
45 ವರ್ಷ ಮೇಲ್ಪಟ್ಟ ನಾಗರಿಕರಿಗೂ ಸಹ ಲಸಿಕೆ ನೀಡುವ ಕಾರ್ಯ ಮುಂದುವರೆಸಬೇಕು. ಎಲ್ಲಿಯೂ ದೂರುಗಳು ಹಾಗೂ ಜನದಟ್ಟಣೆಯಾಗದಂತೆ ಲಸಿಕೆ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಪ್ರತಿದಿನ ನಿಗದಿಪಡಿಸಲಾಗಿರುವ ಗುರಿಯನ್ನು ತಲುಪಲೇಬೇಕು. ಇನ್ನಷ್ಟು ಸುಧಾರಣಾ ಹಾಗೂ ಪೂರ್ಣ ಪ್ರಮಾಣದ ಸುವ್ಯವಸ್ಥೆ ಸಿದ್ದತೆಯೊಂದಿಗೆ ಲಸಿಕಾ ಪ್ರಗತಿಯಲ್ಲಿ ಜಿಲ್ಲೆ ಹೆಚ್ಚಿನ ಸಾಧನೆ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ರೋಗಲಕ್ಷಣಗಳು ಕಂಡುಬಂದ ಕೂಡಲೇ ತಡಮಾಡದೇ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಯಾವ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆಯೋ ಅಂತಹ ಕಡೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಸೋಂಕು ಹರಡದಂತೆ ಕಡಿವಾಣ ಹಾಕಬೇಕು ಎಂದರು.
ಲಾಕ್‍ಡೌನ್ ಅವಧಿಯಲ್ಲಿ ಕೆಲ ಗ್ರಾಮಗಳ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪರಿಶೀಲಿಸಬೇಕು. ಎಲ್ಲಿಯೂ ನಿಗದಿತ ಅವಧಿಯ ನಂತರ ಮದ್ಯ ಮಾರಾಟ, ಸಾಗಾಣಿಕೆಗೆ ಅವಕಾಶವಾಗದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ನಿರ್ದೇಶನ ನೀಡಿದರು.