ಲಸಿಕಾ ಆಂದೋಲನದ ಹೊಸ್ತಿಲಲ್ಲಿ ಭಾರತ


ನವದೆಹಲಿ ಜನವರಿ-೪ ಬೃಹತ್ ಲಸಿಕಾ ಆಂದೋಲನ ಕೈಗೊಳ್ಳುವ ಹೊಸ್ತಿಲಲ್ಲಿ ಭಾರತ ಇದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಹೇಳಿದ್ದಾರೆ.
ವಿವಿಧ ಕಂಪನಿಗಳು ಅಭಿವೃದ್ಧಿಪಡಿಸಿರುವ ೨ ಕೋವಿಡ್ ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದನೆ ನೀಡಿದ ಮರುದಿನವೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ವಿಷಯ ತಿಳಿಸಿದ್ದಾರೆ.
ವಿಶ್ವದಲ್ಲಿ ಅತಿ ದೊಡ್ಡದಾದ ಸಾಮೂಹಿಕ ಲಸಿಕಾ ಆಂದೋಲನವನ್ನು ದೇಶದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ ಅವರು, ಎಲ್ಲಾ ವಿಜ್ಞಾನಿಗಳು ಹಾಗೂ ತಂತ್ರಜ್ಞರಿಗೆ ದೇಶ ಋಣಿಯಾಗಿದೆ ಎಂದು ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶ ಉದ್ಘಾಟಿಸಿ, ರಾಷ್ಟ್ರೀಯ ಸ್ವಯಂಚಾಲಿತ ಟೈಮ್ ಸ್ಕೇಲ್ ಹಾಗೂ ಭಾರತೀಯ ನಿರ್ದೇಶಕ ದ್ರವ್ಯವನ್ನು ಲೋಕಾರ್ಪಣೆ ಮಾಡಿದ ನಂತರ ಅವರು, ೨ ಕೋವಿಡ್ ಲಸಿಕೆ ತಯಾರಿಕೆಯಲ್ಲಿ ಭಾರತ ಯಶಸ್ವಿಯಾಗಿದೆ. ದೇಶಾದ್ಯಂತ ಜನವರಿಯಲ್ಲೇ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದರು.
ಆತ್ಮನಿರ್ಭರ್ ಯೋಜನೆಯಲ್ಲಿ ಭಾರತದ ವಿಜ್ಞಾನಿಗಳ ಕೊಡುಗೆ ಅಪಾರ. ದೇಶದ ವಿಜ್ಞಾನಿಗಳ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದರು.
ಭಾರತ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ವಿಜ್ಞಾನ ಕ್ಷೇತ್ರದಲ್ಲೂ ವೇಗವಾಗಿ ಬೆಳೆಯುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ವಿದೇಶಗಳಿಗೆ ಭಾರತ ಲಸಿಕೆ ರಫ್ತು ಮಾಡಲಿದೆ ಎಂದು ಅವರು ಹೇಳಿದರು.
ಇದುವರೆಗೂ ಭಾರತ ಕೆಲ ಲಸಿಕೆಗಳಿಗೆ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಈಗ ಭಾರತದ ಮೇಲೆ ಹಲವು ದೇಶಗಳು ಅವಲಂಬಿತವಾಗಿವೆ. ಹೊಸ ವರ್ಷ ಹಲವು ಅವಕಾಶಗಳನ್ನು ಹೊತ್ತು ತಂದಿದೆ. ಭಾರತದ ಎದುರು ಹೊಸ ಗುರಿ, ಹೊಸ ಸವಾಲುಗಳಿವೆ ಎಂದರು.
ಈಗ ಕಾಲ ಬದಲಾಗಿದೆ. ಆಮದು ಕಡಿಮೆಯಾಗಿದೆ. ರಫ್ತು ದಿನದಿಂದ ದಿನಕ್ಕೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಮೇಕ್ ಇನ್ ಇಂಡಿಯಾ ಅಭಿಯಾನ ಕುರಿತು ಮಾತನಾಡಿದ ನರೇಂದ್ರ ಮೋದಿ, ಇಡೀ ವಿಶ್ವ ಭಾರತೀಯ ಉತ್ಪನ್ನ ಗಳಿಂದಲೇ ತುಂಬಿ ತುಳುಕಬೇಕು ಎಂಬ ಆಶಯ ನಮ್ಮದಲ್ಲ ಆದರೆ ವಿಶ್ವದ ಎಲ್ಲೆಡೆ ಭಾರತೀಯ ಉತ್ಪನ್ನಗಳ ಬಗ್ಗೆ ಪ್ರತಿಯೊಬ್ಬ ಗ್ರಾಹಕರ ಹೃದಯ ಗೆಲ್ಲುವಂತಾಗಬೇಕು ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಜಾಗತಿಕವಾಗಿ ಒಪ್ಪಿಗೆಯಾಗುವಂತಹ ಉತ್ಪನ್ನಗಳನ್ನು ಉತ್ಪಾದಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸಿಎಸ್‌ಐಆರ್ ವಿಜ್ಞಾನಿಗಳು ದೇಶದ ಹೆಚ್ಚೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನುಭವಿಸಿದ ಕಷ್ಟಕಾರ್ಪಣ್ಯಗಳು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಈ ಸಂದರ್ಭದಲ್ಲಿ ಆಗಿರುವ ಪ್ರಗತಿ ಕುರಿತು ಮುಂದಿನ ತಲೆಮಾರಿಗೆ ತಿಳಿಸಬೇಕೆಂದು ನರೇಂದ್ರ ಮೋದಿ ಕರೆ ನೀಡಿದರು.
ಇದರಿಂದ ಮುಂದಿನ ಪೀಳಿಗೆಯ ಯುವ ವಿಜ್ಞಾನಿಗಳು ನಾಳಿನ ಭವಿಷ್ಯ ಎದುರಿಸಲು ಸಿದ್ದರಾಗುವಂತೆ ಭೂಮಿಕೆಯನ್ನು ನಿರ್ಮಿಸಲಿದೆ ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಪರಿಸರ ಗುಣಮಟ್ಟ ಪ್ರಯೋಗಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.
ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತಿತರರು ಉಪಸ್ಥಿತರಿದ್ದರು.
ಲಸಿಕೆ ಆಂದೋಲನಕ್ಕೆ ಕೇಂದ್ರದ ಪೂರ್ವಸಿದ್ಧತೆ
ಕೋವಿಡ್- ೧೯ ಲಸಿಕೆ ಆಂದೋಲವನ್ನು ದೇಶಾದ್ಯಂತ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲು ಅಗತ್ಯವಿರುವ ಸಿಬ್ಬಂದಿಯನ್ನು ಗುರುತಿಸುವ ಕಾರ್ಯ ಭರದಿಂದ ಸಾಗಿದೆ.
ನಿವೃತ್ತ ವೈದ್ಯರು ಮತ್ತು ನರ್ಸ್‌ಗಳು, ಹೋಂಗಾರ್ಡ್‌ಗಳು ನಿವೃತ್ತ ಯೋಧರು ಹಾಗೂ ನೆಹರು ಯುವ ಕೇಂದ್ರ ಸಂಘಟನೆಯ ಸ್ವಯಂ ಸೇವಕರು ಮುಂತಾದವರನ್ನು ಗುರುತಿಸುವ ಕಾರ್ಯ ಮುಂದುವರೆದಿದೆ. ಇವರೆಲ್ಲರನ್ನೂ ಬಳಸಿಕೊಂಡು ಲಸಿಕೆ ಆಂದೋಲನವನ್ನು ಸುಸೂತ್ರವಾಗಿ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ವಿಶ್ವದ ಅತಿ ದೊಡ್ಡ ಸಾಮೂಹಿಕ ಲಸಿಕೆ ಆಂದೋಲನ ಕಾರ್ಯಕ್ರಮವನ್ನು ದೇಶದಲ್ಲಿ ಕೈಗೆತ್ತಿಕೊಳ್ಳಲಿದ್ದು, ಲಸಿಕೆ ಆಂದೋಲನದ ಸಂದರ್ಭದಲ್ಲಿ ನಿಯೋಜಿತ ಸಿಬ್ಬಂದಿ ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದೆ ಕಾರ್ಯನಿರ್ವಹಿಸಲು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ.
ಲಸಿಕೆ ಅಧಿಕಾರಿಯಾಗಿ ಪೊಲೀಸರು ಹೋಂಗಾರ್ಡ್‌ಗಳು, ರಕ್ಷಣಾ ಇಲಾಖೆ ಅಥವಾ ಎಂಸಿಸಿ, ಎನ್‌ಎಸ್‌ಎಸ್ ಅಥವಾ ನೆಹರು ಯುವ ಕೇಂದ್ರ ಸಂಘಟನೆಯ ಸ್ವಯಂ ಸೇವಕರನ್ನು ನೇಮಿಸಲು ಸರ್ಕಾರ ಮುಂದಾಗಿದೆ.
ಲಸಿಕೆ ಹಾಕುವ ಮುನ್ನ ಸಂಬಂಧಪಟ್ಟವರು ತಮ್ಮ ಹೆಸರನ್ನು ನೋಂದಣಿ ಮಾಡಿದ್ದಾರೆ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ, ಲಸಿಕೆ ನೀಡಿದ ನಂತರ ಅವರ ದೇಹದಲ್ಲಾಗುವ ಬದಲಾವಣೆಗಳ ಕುರಿತು ನಿಗಾ ವಹಿಸುವುದು, ಲಸಿಕೆ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.
ಜುಲೈ ವೇಳೆಗೆ ೩೦೦ ದಶಲಕ್ಷ ಜನರಿಗೆ ನೀಡುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ ಆರೋಗ್ಯ ಕಾರ್ಯಕರ್ತರು, ಕೊರೊನಾ ಮುಂಚೂಣಿ ಯೋಧರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಆದ್ಯತೆ ಮೇಲೆ ಲಸಿಕೆ ಹಾಕಲು ಸರ್ಕಾರ ಉದ್ದೇಶಿಸಿದೆ.
ಹೀಗಾಗಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿನ ವೈದ್ಯರು ಮತ್ತು ಇತರ ಸಿಬ್ಬಂದಿಯನ್ನು ಬಳಸಿಕೊಳ್ಳಲು ಕಾರ್ಯಕ್ರಮವನ್ನು ರೂಪಿಸಲಾಗಿದೆ.