ಲವ್ ಜಿಹಾದ್ ಹಿಂದೂ ಕುಟುಂಬದ ವಿರುದ್ಧ ದೂರು

ವಡೋದರಾ, ಏ.೫- ನಾಲ್ಕೈದು ದಿನಗಳ ಹಿಂದೆಯಷ್ಟೇ ಗುಜರಾತ್‌ನಲ್ಲಿ ಧರ್ಮ ಸ್ವಾತಂತ್ರ್ಯ ಕಾಯ್ದೆ (ಲವ್ ಜಿಹಾದ್) ಜಾರಿಗೆ ಬಂದಿತ್ತು. ಇದೀಗ ಜಾರಿಗೆ ಬಂದ ನಾಲ್ಕು ದಿನದಲ್ಲೇ ಮದುವೆಯ ಮೂಲಕ ಮತಾಂತರಕ್ಕೆ ಒತ್ತಾಯಪಡಿಸುವ ಆರೋಪದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ವಿರುದ್ಧ ಪ್ರಕರಣ ದಾಖಲಾಗಿದೆ.
ಅರ್ಬಾಝ್‌ಖಾನ್ ಪಠಾಣ್ ಎಂಬವರು ಕಲ್ಪೇಶ್ ಚೌಹಾನ್ ಸೇರಿದಂತೆ ಹಲವರ ವಿರುದ್ಧ ವಡೋದರಾದ ಜೆ.ಸಿ. ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉತ್ತಮ ಜೀವನ, ಆರ್ಥಿಕ ಸದೃಢತೆ, ಪರಿಪೂರ್ಣ ಸ್ವಾತಂತ್ರ್ಯ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡಿ ನನ್ನ ಸಹೋದರಿಯನ್ನು ಮದುವೆಯಾಗಲು ಒತ್ತಾಯಿಸಿ, ಈ ಮೂಲಕ ಲವ್ ಜಿಹಾದ್‌ಗೆ ಒಳಪಡಿಸಲಾಗುತ್ತಿದೆ ಎಂದು ಅರ್ಬಾಝ್‌ಖಾನ್ ಅವರು ಕಲ್ಪೇಶ್ ಚೌಹಾನ್ ವಿರುದ್ಧ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ತೀವ್ರ ಕುತೂಹಲ ಮೂಡಿಸಿದೆ. ಯಾಕೆಂದರೆ ಗುಜರಾತ್‌ನ ನೂತನ ಧರ್ಮ ಸ್ವಾತಂತ್ರ್ಯ ಕಾಯ್ದೆ ಇನ್ನೂ ಕಾನೂನಾಗಿ ಮಾರ್ಪಾಡಾಗಿಲ್ಲ.