ಲವ್ ಜಿಹಾದ್ ಕೈ-ಕಮಲ ವಾಕ್ಸಮರ

ಬೆಂಗಳೂರು.ನ.೭- ಲವ್ ಜಿಹಾದ್‌ಗೆ ಅಂಕುಶ ಹಾಕಲು ಮುಂದಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಲಾಭಕ್ಕಾಗಿ ಕೋಮು ಜ್ಬಾಲೆ ಹೊತ್ತಿಸಲು ಬಯಸಿದಂತಿದೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ನಿಮ್ಮ ಹಸಿರು ಕನ್ನಡಕವನ್ನು ತೆಗೆದು ಸುತ್ತಲೂ ನೋಡಿ ಎಂದು ತಿರುಗೇಟು ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಲವ್ ಜಿಹಾದ್ ಸಂಗತಿಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಗೃಹ ಸಚಿವರು ತಮ್ಮ ಇಚ್ಛೆಯ ಆಧಾರದ ಮೇಲೆ ಜಾರಿಗೊಳಿಸುವರೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸುವ ಮೂಲಕ ದಾರಿ ತಪ್ಪಿಸಲು ಯತ್ನಿಸುತ್ತಿದೆ. ನ್ಯಾಯಾಲಯ ಅಂತರ್ ಧಾರ್ಮಿಕ ವಿವಾಹದ ಉದ್ದೇಶದಿಂದ ಮತಾಂತರ ಮಾಡುವುದು ತಪ್ಪು ಎಂದು ಮಾತ್ರ ಹೇಳುತ್ತದೆ. ಆದರೆ, ಅಂತರ್ ಧಾರ್ಮಿಕ ಮದುವೆಯೇ ತಪ್ಪು ಎಂದು ಅದು ಹೇಳುವುದಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಸ್ಪೂರ್ತಿ ಪಡೆಯುತ್ತಿದ್ದಾರೆ. ಕರ್ನಾಟಕ ಯಾವಾಗಲು ಉದಾರ ಮತ್ತು ಪ್ರಗತಿಪರ ವಿಚಾರಗಳಿಗೆ ಹೆಸರುವಾಸಿಯಾಗಿದೆ.
ಗೂಂಡಾ ರಾಜ್ಯ ಎಂದು ಕರೆಯಲ್ಪಡುವ ಉತ್ತರ ಪ್ರದೇಶ, ಇಂದಿಗೂ ಸ್ಫೂರ್ತಿ ಇಲ್ಲವೆ ಮಾದರಿ ರಾಜ್ಯವಾಗಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಶಾದಿಭಾಗ್ಯವನ್ನು ಒಂದು ಸಮುದಾಯಕ್ಕೆ ಮಾತ್ರ ನೀಡಬೇಕೆಂಬ ಕಾನೂನು ಯಾವ ದಾಖಲೆಯಲ್ಲಿ ಬರೆಯಲಾಗಿದೆ. ಹಿಂದೂ ಧರ್ಮವನ್ನು ಮುರಿಯುವ ನಿಮ್ಮ ಕಾರ್ಯವನ್ನು ಸಂಸತ್ತು ಅಂಗೀಕರಿಸಿದೆಯೇ ಎಂದು ಪ್ರಶ್ನಿಸಿದೆ. ನಿಮ್ಮ ಹಸಿರು ಕನ್ನಡಕವನ್ನು ತೆಗೆದು ಹಾಕಿ ಸುತ್ತಲೂ ನೋಡಿ. ಮೂಲಭೂತವಾದಿಗಳ ದುಷ್ಟತನಕ್ಕೆ ಎಷ್ಟು ಮುಗ್ಧರು ಬಲಿಯಾಗುತ್ತಾರೆ ಎಂಬುದನ್ನು ಕಂಡುಕೊಳ್ಳಿ ನಿಮ್ಮಂತಹ ಟಿಪ್ಪುಸುಲ್ತಾನ್ ಆರಾಧಕರಿಗೆ ಹಿಂದೂಗಳನ್ನು ಉಳಿಸುವ ಪ್ರಯತ್ನವು ಕ್ಷುಲ್ಲಕವಾಗಬಹುದು. ಆದರೆ, ನಮಗೆ ಅದು ನಮ್ಮ ಕರ್ತವ್ಯ ಎಂದು ಟ್ವಟ್ಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದೆ.
ನಾಗರಿಕರೊಂದಿಗೆ ಸತ್ಯ ಮಾತಾಡುವುದನ್ನು ನಂಬುತ್ತೇವೆ. ವಿವಾಹದ ಸಲುವಾಗಿ ಮತಾಂತರಕ್ಕೆ ಅಂತ್ಯ ಹಾಡಲು ಸರ್ಕಾರ ಬಯಸಿದೆ. ನಿಮಗೆ ಈ ಸತ್ಯಗಳು ಏಕೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದೆ.
ಟಿಪ್ಪುಸುಲ್ತಾನ್, ಔರಂಗಜೇಬ್ ಮತ್ತು ತುಘಲಕ್ ಅವರಂತಹ ನಿರಂಕುಶಾಧಿಕಾರಿಗಳಿಂದ ನೀವು ಸ್ಫೂರ್ತಿ ಪಡೆದುಕೊಂಡಿದ್ದೀರಿ. ನೀವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರ್‌ನಲ್ಲಿ ವಾಗ್ದಾಳಿ ನಡೆಸಿದೆ.