ಲವ್ ಜಿಹಾದ್ ಅಂಕುಶಕ್ಕೆ ಕಠಿಣ ಕಾನೂನು: ಬಿಎಸ್‌ವೈ

ಮಂಗಳೂರು, ನ. ೫- ರಾಜ್ಯದ ಕೆಲವು ಕಡೆ ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ನಡೆಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಅಂತ್ಯ ಹಾಡಲು ಕಠಿಣ ಕಾನೂನು ಜಾರಿ ಮಾಡುವ ಸುಳಿವನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದಿರುವ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್‌ನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಲವ್ ಜಿಹಾದ್ ಹೆಸರಿನಲ್ಲಿ ಕೆಲವು ಶಕ್ತಿಗಳು ಮತಾಂತರ ಮಾಡುವ ಕೆಲಸದಲ್ಲಿ ಸಕ್ರಿಯವಾಗಿವೆ. ಇದಕ್ಕೆಲ್ಲಾ ಕೊನೆ ಹಾಡುತ್ತೇವೆ ಎಂದರು.
ಲವ್ ಜಿಹಾದ್ ಬಗ್ಗೆ ಮುಖ್ಯಮಂತ್ರಿಗಳ ಈ ಮಾತು ಮುಂದೆ ಮತಾಂತರ ತಡೆಯಲು ಕಠಿಣ ಕಾನೂನು ಜಾರಿಯ
ಮುನ್ಸೂಚನೆ ನೀಡಿದೆ.
ಲವ್ ಜಿಹಾದ್ ಹೆಸರಿನಲ್ಲಿ ಮತಾಂತರವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಮುಂದೆ ಇದಕ್ಕೆಲ್ಲಾ ಅಂತ್ಯ ಹಾಡುವುದಾಗಿಯೂ ಅವರು ಹೇಳಿದರು.
ಮತ್ತೆ ಬಿಜೆಪಿ ಅಧಿಕಾರಕ್ಕೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೊರೊನಾ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿದೆ. ನಮ್ಮ ಸರ್ಕಾರದ ಈ ಕ್ರಮಗಳು ಮುಂದೆ ೨೦೨೩ ರಲ್ಲೂ ಬಿಜೆಪಿ ಅಧಿಕಾರ ಹಿಡಿಯಲು ನೆರವಾಗಲಿದೆ ಎಂದರು.
ಈಗಿನ ಬಿಜೆಪಿ ಸರ್ಕಾರದ ಉತ್ತಮ ಆಡಳಿತದಿಂದ ಮತ್ತೆ ೨೦೨೩ ರಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದು ಅವರು ಹೇಳಿದರು.
ಆರು ತಿಂಗಳಿಂದ ಕೊರೊನಾ ಪರಿಸ್ಥಿತಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈಗ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ಯಥಾಸ್ಥಿತಿಗೆ ಬರುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ೫೦ ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಮಂಗಳೂರು ನಗರದ ಅಭಿವೃದ್ಧಿಗೆ ೧೨೫ ಕೋಟಿ ರೂ. ಒದಗಿಸುವುದಾಗಿಯೂ ಹೇಳಿದ ಮುಖ್ಯಮಂತ್ರಿಗಳು, ಸ್ಮಾರ್ಟ್‌ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ಉತ್ತಮ ಕೆಲಸಗಳು ನಡೆದಿವೆ ಎಂದರು.
ಕರಾವಳಿಯಲ್ಲಿ ಆಂತರಿಕ ಭದ್ರತೆಗೆ ಹೆಚ್ಚು ಒತ್ತು ನೀಡಿದ್ದೇವೆ. ಹಾಗೆಯೇ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಮುಂದಿನ ಆರು ತಿಂಗಳಲ್ಲಿ ಕರಾವಳಿ ಪ್ರದೇಶಗಳ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೊರೊನಾ ಈಗ ನಿಯಂತ್ರಣದಲ್ಲಿದೆ ಎಂದರು.
ಡ್ರಗ್ ಮುಕ್ತ ರಾಜ್ಯ
ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ನಿರ್ಧರಿಸಿದ್ದೇವೆ. ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲಾಗುತ್ತಿದೆ ಎಂದರು.
ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಬಿಗಿಯಾದ ಕ್ರಮ ಕೈಗೊಂಡಿದ್ದೇವೆ. ಡ್ರಗ್ ಮಾಫಿಯಾದಲ್ಲಿ ಇರುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅಧಿಕಾರ ವಹಿಸಿಕೊಂಡ ನಂತರ ಪಕ್ಷ ಬಲಪಡಿಸಿದ್ದಾರೆ. ಕಳೆದ ೨೦ ವರ್ಷಗಳ ನಂತರ ಮಂಗಳೂರಿನಲ್ಲಿ ಕಾರ್ಯಕಾರಿಣಿ ನಡೆದಿದೆ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ೧೮ ಮಂದಿ ಆಡಳಿತ ಪಕ್ಷದ ಶಾಸಕರು ಬಿಜೆಪಿ ಸೇರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದರು ಎಂದರು.
ಯಾವುದೇ ಚುನಾವಣೆಗಳನ್ನು ಕಾರ್ಯಕರ್ತರು ಹಗುರವಾಗಿ ತೆಗೆದುಕೊಳ್ಳಬಾರದು. ಅಭ್ಯರ್ಥಿಗಳ ಗೆಲುವಿಗೆ ಸಂಪೂರ್ಣ ಶ್ರಮ ಹಾಕಬೇಕು ಎಂದು ಕಿವಿ ಮಾತು ಹೇಳಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ರಾಜರಾಜೇಶ್ವರಿನಗರ ಮತ್ತು ಸಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ದಯನೀಯ ಸೋಲು ಅನುಭವಿಸಲಿವೆ ಎಂದರು.
ಈ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸದಾನಂದಗೌಡ, ಉಪಮುಖ್ಯಮಂತ್ರಿ ಗೋವಿಂದಕಾರಜೋಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರುಗಳಾದ ಜಗದೀಶ್‌ಶೆಟ್ಟರ್, ಈಶ್ವರಪ್ಪ, ಆರ್. ಅಶೋಕ್, ಕೋಟಾ ಶ್ರೀನಿವಾಸಪೂಜಾರಿ ಸೇರಿದಂತೆ ಹಲವು ಶಾಸಕರು, ಸಂಸದರು, ಮುಖಂಡರುಗಳು ಉಪಸ್ಥಿತರಿದ್ದರು.