ಲವ್ ಜಿಹಾದ್‌ಗೆ ಯತ್ನ ಕಾಶ್ಮೀರಿ ಟೆಕ್ಕಿ ವಿರುದ್ಧ ಕೇಸ್

ಬೆಂಗಳೂರು,ಸೆ.೨೧-ಎಲೆಕ್ಟ್ರಾನಿಕ್ ಸಿಟಿಯ ಪ್ರತಿಷ್ಠಿತ ಐಟಿ ಕಂಪನಿಯ ಉದ್ಯೋಗಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಲವ್ ಜಿಹಾದ್‌ಗೆ ಪ್ರಯತ್ನ ನಡೆಸಿದ ಆರೋಪದ ಮೇಲೆ ಕಾಶ್ಮೀರ ಮೂಲದ ಮುಸ್ಲಿಂ ಯುವಕನ ಮೇಲೆ ಎಫ್‌ಐಆರ್ ದಾಖಲಾಗಿದೆ.
ಯುವಕ ಮತ್ತು ಯುವತಿ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,ಪರಸ್ಪರ ಆಕರ್ಷಣೆಗೆ ಒಳಗಾಗಿ ಮದುವೆಗೆ ಮುನ್ನವೇ ಲೈಂಗಿಕ ಸಂಪರ್ಕದಲ್ಲಿ ತೊಡಗಿದ್ದರು.
ಯುವಕ ಮದುವೆಯಾಗುವ ಭರವಸೆ ನೀಡಿದ್ದ ಆರೋಪಿ ಮೊಜೀಫ್ ಅಶ್ರಫ್ ಬೇಗ್ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದ.
ಮುಸ್ಲಿಂ ಆಗಿದ್ದರೂ ಯಾವುದೇ ಧಾರ್ಮಿಕ ಕಟ್ಟುಪಾಡುಗಳು ಇಲ್ಲದೇ, ಕೋರ್ಟ್‌ನಲ್ಲೇ ಮದುವೆಯಾಗೋಣ ಎಂದು ಆಶ್ವಾಸನೆ ನೀಡಿ ಸಾಕಷ್ಟು ಸಮಯ ಆಕೆಯ ಜತೆಗೇ ವಾಸವಾಗಿದ್ದ. ಆದರೆ, ಕೊನೆಗೆ ಎಲ್ಲವೂ ಮುಗಿದು ಇನ್ನೇನು ಮದುವೆ ಎನ್ನುವ ಪ್ರಸ್ತಾಪ ಎದುರಾದಾಗ ತನ್ನ ನಿಜ ಬಣ್ಣವನ್ನು ಬಯಲು ಮಾಡಿದ್ದ.
ಮದುವೆಯಾಗಬೇಕು ಎಂದರೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟಿದ್ದ ಆತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಧಾನಿಗೆ ತಲುಪಿದ್ದ ಕೇಸ್ :
ಕಳೆದ ಸೆಪ್ಟೆಂಬರ್ ೬ರಂದು ಟೆಕ್ಕಿ ಯುವತಿಯೊಬ್ಬಳು ನಾನು ಲವ್ ಜಿಹಾದ್‌ಗೆ ಒಳಗಾಗಿದ್ದೇನೆ. ದಯವಿಟ್ಟು ನನ್ನನ್ನು ಆ ಮುಸ್ಲಿಂ ಯುವಕನಿಂದ ರಕ್ಷಿಸಿ ನಾನು ನಂಬಿ ಮೋಸ ಹೋಗಿದ್ದೇನೆ. ಈಗ ಅವನು ಬೆದರಿಸುತ್ತಿದ್ದಾನೆ, ನನ್ನನ್ನು ರಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದರು.
ನನಗೆ ತುರ್ತಾಗಿ ಪೊಲೀಸರ ನೆರವು ಬೇಕಾಗಿದೆ ಎಂದು ಕೇಳಿಕೊಂಡಿದ್ದರು. ಹಲವಾರು ಮಂದಿ ಅವರ ನೆರವಿಗೆ ಬಂದಿದ್ದರು ನಗರ ಪೊಲೀಸರು ಕೂಡಾ ಪ್ರತಿಕ್ರಿಯಿಸಿದ್ದರು.
ಯುವತಿ ಮಾಡಿರುವ ಟ್ವೀಟ್‌ಗಳು, ಹೇಳಿಕೊಂಡಿರುವ ವಿಚಾರಗಳ ಒಟ್ಟಾರೆ ತಾತ್ಪರ್ಯ ಏನೆಂದರೆ, ಈ ಯುವತಿ ಮತ್ತು ಕಾಶ್ಮೀರದ ಯುವಕ ಪರಸ್ಪರ ಪರಿಚಯ ಆಗಿದ್ದು ಫೇಸ್ ಬುಕ್ ಮೂಲಕ ಮೊದಲು ಪರಸ್ಪರ ಚಾಟ್ ಮಾಡುತ್ತಿದ್ದ ಅವರು ಬಳಿಕ ಭೇಟಿಯಾಗಿದ್ದಾರೆ.
ಮೊದಲಿದ್ದ ಸ್ನೇಹದ ಗೆರೆ ದಾಟಿ ಪ್ರೇಮಿಸಲು ಆರಂಭಿಸಿದ್ದಾರೆ. ಬಳಿಕ ಅದು ಸಂಬಂಧವಾಗಿ ಮುಂದುವರಿದಿದೆ. ಮದುವೆಯಾಗುವುದಾಗಿ ನಂಬಿಸಿದ ಕಾಶ್ಮೀರದ ಮುಸ್ಲಿಂ ಯುವಕ ಆಕೆಯ ಜತೆ ದೈಹಿಕ ಸಂಪರ್ಕವನ್ನೂ ನಡೆಸಿದ್ದಾನೆ. ಇದನ್ನೆಲ್ಲ ನಂಬಿದ ಯುವತಿ ೨೦೧೯ರಿಂದಲೇ ಆತನ ಜತೆಗೆ ಲಿವಿಂಗ್ ಟುಗೆದರ್ ಮಾದರಿಯಲ್ಲಿ ಸಹಜೀವನ ನಡೆಸುತ್ತಿದ್ದಳು.
ಧರ್ಮ ಬದಲಾವಣೆ:
ಈ ನಡುವೆ ಆತ ಮದುವೆಯಾಗಲು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬಲವಂತ ಮಾಡಿದ್ದು,ಯುವತಿಗೆ ಮತಾಂತರವಾಗುವುದು ಇಷ್ಟವಿಲ್ಲದಿದ್ದರೂ ಬೆದರಿಸಿ ಧರ್ಮ ಬದಲಾವಣೆ ಮಾಡಲಾಗಿದೆ.
ಇವರಿಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದರಿಂದ ಅವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು ಎನ್ನಲಾಗಿದೆ. ಈ ನಡುವೆ, ಮತಾಂತರವಾದ ಬಳಿಕ ನಾನು ಮದುವೆಯಾಗುವುದಿಲ್ಲ ಎಂದು ಯುವಕ ಹೇಳಿದ್ದಾನೆ. ಆಕೆಯಿಂದ ತಪ್ಪಿಸಿಕೊಳ್ಳುತ್ತಿರುವ ಯುವಕ ಜತೆಗೆ ಪ್ರಾಣ ಬೆದರಿಕೆಯನ್ನೂ ಹಾಕುತ್ತಿದ್ದಾನೆ ಎನ್ನಲಾಗಿದೆ.
ಆರೋಪಿ ಟೆಕ್ಕಿ ಪತ್ತೆಗೆ ಬಲೆ ಬೀಸಿದ ಪೊಲೀಸರು
ಟೆಕ್ಕಿ ಯುವತಿ ಟ್ವಿಟರ್‌ನಲ್ಲಿ ದೂರು ದಾಖಲಿಸಿದಾಗ ಆರಂಭದಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರ ಸ್ಥಳ ಪರಿಶೀಲನೆ ವೇಳೆ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆದಿದ್ದ ಕೃತ್ಯ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಕರಣ ಈಗ ಹೆಬ್ಬಗೋಡಿ ಠಾಣೆಯಲ್ಲಿದೆ.
ಟೆಕ್ಕಿ ಪತ್ತೆಗೆ ಬಲೆ:
ಹೆಬ್ಬಗೋಡಿ ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ಆರೋಪಿ ಟೆಕ್ಕಿ ಪತ್ತೆಗೆ ಬಲೆ ಬೀಸಿದ್ದಾರೆ. ಹೆಬ್ಬಗೋಡಿ ಪೊಲೀಸರ ಒಂದು ತಂಡ ಕಾಶ್ಮೀರಕ್ಕೆ ಹೋಗಿದೆ.
ಐಪಿಸಿ ಸೆಕ್ಷನ್ ೫೦೬, ೩೪, ೩೭೬,೩೭೭, ೪೨೦,೪೧೭ ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ರಕ್ಷಣಾ ಕಾಯ್ದೆ ೨೦೨೨ರ ಅಡಿ ಎಫ್‌ಐಆರ್ ದಾಖಲು ಕಾಶ್ಮೀರಕ್ಕೆ ತೆರಳಿದೆ. ಐಪಿಸಿ ಸೆಕ್ಷನ್ ೫೦೬, ೩೪, ೩೭೬,೩೭೭, ೪೨೦,೪೧೭ ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ರಕ್ಷಣಾ ಕಾಯ್ದೆ ೨೦೨೨ರ ಅಡಿ ಎಫ್‌ಐಆರ್ ದಾಖಲಾಗಿದೆ.