ಲವಲವಿಕೆಯಿಂದ ಆಡಳಿತರೂಢ ಸದಸ್ಯರಿಗಾಗಿ ಕಾದು ಕುಳಿತ ಕಾಂಗ್ರೆಸ್ ಸದಸ್ಯರು

ರಾಯಚೂರು.ಜು.೨೬- ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು ಮತ್ತು ಆಡಳಿತರೂಢ ನಗರಸಭೆ ಸದಸ್ಯರು ಸಭೆಗೆ ಆಗಮಿಸುವ ಪೂರ್ವ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಸಭೆಗೆ ಹಾಜರಾಗಿರುವುದು ಇಂದಿನ ಸಭೆ ವಿಶೇಷತೆಯಾಗಿತ್ತು.
ಆಡಳಿತರೂಢ ಬಿಜೆಪಿ ಪಕ್ಷದಲ್ಲಿ ಎಲ್ಲವು ಸರಿ ಇಲ್ಲ ಎಂಬುದು ಇಂದಿನ ಸಭೆ ಹಾಜರಾತಿಗೆ ನಿದರ್ಶನವಾಗಿತ್ತು. ೧೫ ನೇ ಹಣಕಾಸು ಯೋಜನೆ ಕ್ರಿಯಾಯೋಜನೆ ಚರ್ಚೆ ಇಂದಿನ ವಿಶೇಷ ಸಭೆ ಕರೆಯಲಾಗಿತ್ತು. ಪ್ರತಿ ಸಭೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರಿಗೆ ತಕ್ಕ ಉತ್ತರ ನೀಡುವ ಗತ್ತಿನಲ್ಲಿ ಎಲ್ಲರಿಗಿಂತ ಮುಂಚಿತವಾಗಿ ಸಭೆಗೆ ಹಾಜರಾಗುವ ಬಿಜೆಪಿ ಸದಸ್ಯರು ಮತ್ತು ಮುಖಂಡರಲ್ಲಿ ಇಂದು ಬಹುತೇಕರು ನಗರಸಭೆ ಅಕ್ಕ ಪಕ್ಕಕ್ಕೂ ಸುಳಿಯದಿರುವುದು ವಿಶೇಷವಾಗಿತ್ತು.
ಉಪಾಧ್ಯಕ್ಷರ ಕೋಣೆಯಿಂದ ಖುಷಿ ಮತ್ತು ಲವಲವಿಕೆಯಿಂದ ಕಾಂಗ್ರೆಸ್ ಸದಸ್ಯರಾದ ಜಯಣ್ಣ, ಜಿಂದಪ್ಪ, ಎನ್.ಶ್ರೀನಿವಾಸ ರೆಡ್ಡಿ, ತಿಮ್ಮಪ್ಪ ನಾಯಕ ಅವರು ಸಭಾಂಗಣಕ್ಕೆ ಬಂದು ಕುಳಿತಿದ್ದರು. ತದ ನಂತರ ಖುರ್ಷೀದ್ ಭಾನು ವಾಹೀದ್, ಸಮೀನಾ ಮುಕ್ರಂ ಅವರು ಆಗಮಿಸಿದ್ದರು.
ಅಧ್ಯಕ್ಷ, ಉಪಾಧ್ಯಕ್ಷ, ಆಯುಕ್ತರು ಸೇರಿದಂತೆ ಆಡಳಿತರೂಢ ಪಕ್ಷದ ಸದಸ್ಯರು ಇನ್ನೂ ಸಭೆಗೆ ಬಂದಿರಲಿಲ್ಲ. ನಂತರ ಸಾಜೀದ್ ಸಮೀರ್, ಬಿ.ರಮೇಶ ಅವರು ಸಭೆಗೆ ಆಗಮಿಸಿದರು. ೧೧.೫ ನಿಮಿಷಕ್ಕೆ ಬಿಜೆಪಿಯ ಸದಸ್ಯರಾದ ಈ.ಶಶಿರಾಜ, ಎನ್.ಕೆ.ನಾಗರಾಜ, ವಿ.ನಾಗರಾಜ, ಪಿ.ನವನೀತ ಶ್ರೀನಿವಾಸ ರೆಡ್ಡಿ, ವೆಂಕಟಮ್ಮ ಎನ್.ಶ್ರೀನಿವಾಸ ರೆಡ್ಡಿ, ಸರೋಜಮ್ಮ ದೊಡ್ಡ ಮಲ್ಲೇಶಪ್ಪ, ರೇಖಾ ಮಹೇಂದರ ರೆಡ್ಡಿ, ಡಿ.ಲಕ್ಷ್ಮೀ, ಪಕ್ಷೇತರರಾದ ಹೇಮಲತಾ ಬೂದೆಪ್ಪ ಅವರು ಸಭೆಯಲ್ಲಿದ್ದರು. ನಾಮ ನಿರ್ದೇಶಿತ ಸದಸ್ಯರು ವಿಜಯರಾಜ ಮೂಥಾ, ಲಕ್ಷ್ಮಣ, ಎಸ್.ರಾಜು ಉಪಸ್ಥಿತರಿದ್ದರು.
ನಿಗದಿತ ೧೧ ಗಂಟೆಗೆ ಆರಂಭಗೊಳ್ಳಬೇಕಿದ್ದ ಸಭೆ ಆಡಳಿತರೂಢ ಸದಸ್ಯರ ಸಭೆಗೆ ಬೇಗ ಬಾರದೆ ಇರುವುದರಿಂದ ಸಭೆ ವಿಳಂಬಗೊಂಡಿತು. ಇಂದಿನ ಸಭೆಯಲ್ಲಿ ಆಡಳಿತರೂಢ ಸದಸ್ಯರಿಗಿಂತ ವಿರೋಧ ಪಕ್ಷದ ಸದಸ್ಯರು ತುಂಬ ಲವಲವಿಕೆಯಿಂದ ಇರುವುದು ಕಂಡು ಬಂದಿತು. ಮಾತನಾಡದೆ ಕುಳಿತಿದ್ದ ಬಿಜೆಪಿ ಸದಸ್ಯರನ್ನು ಕರೆದು ಮಾತಾಡಿಸುವ ಮೂಲಕ ಬಹುತೇಕವಾಗಿ ಕಾಂಗ್ರೆಸ್ ಈ ಸಭೆಯನ್ನು ನಿರ್ವಹಿಸಿರುವುದು ವಿಶೇಷವಾಗಿತ್ತು.