ಲಯನ್ಸ್ ಕ್ಲಬ್ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ

ರಾಯಚೂರು.ನ.೧೨-ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಯಚೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಟ್ಯಾಗೋರ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ರಾಯಚೂರಿನ ಎಸ್‌ಆರ್‌ಕೆ ಬಿಎಡ್ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಲಯನ್ಸ್ ಕ್ಲಬ್ ನ ಹಿಂದಿನ ಜಿಲ್ಲಾ ಗೌರ್ನರ್ ಲಯನ್ ಹಣುಮಂತರಾವ್ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, “ನಾವು ಸೇವೆ ಮಾಡುತ್ತೇವೆ” ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜದಲ್ಲಿ ಅವಶ್ಯಕತೆ ಇರುವ ಜನರಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ಅದರ ಕ್ಲಬ್‌ಗಳ ಮೂಲಕ ಐದು ಪ್ರಮುಖ ಜಾಗತಿಕ ಕಾರಣಗಳಾದ ಬಾಲ್ಯದ ಕ್ಯಾನ್ಸರ್, ಮಧುಮೇಹ, ಪರಿಸರ, ಹಸಿವು ಮುಕ್ತ ಮತ್ತು ಕಣ್ಣಿನ ದೃಷ್ಟಿ ಇನ್ನೂ ಅನೇಕ ಸೇವಾ ಕಾರ್ಯಗಳ ಮೇಲೆ ಹೆಚ್ಚು ಗಮನಹರಿಸುತ್ತಿದೆ.
ಸುಮಾರು ಐದು ತಿಂಗಳಿಂದ ಕ್ಲಬ್ ವತಿಯಿಂದ ಪ್ರತಿದಿನ ರಿಮ್ಸ್ ಆಸ್ಪತ್ರೆಯಲ್ಲಿ ಸುಮಾರು ೪೦೦ ರೋಗಿಗಳಿಗೆ ಸಹಾಯಕರಿಗೆ ಉಚಿತ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ದೃಷ್ಟಿ ಕಾರ್ಯಕ್ರಮಗಳ ಅಡಿಯಲ್ಲಿ ಲಯನ್ಸ್ ಕ್ಲಬ್ ರಾಯಚೂರು ಜಿಲ್ಲೆಯ ಮತ್ತು ಸುತ್ತಮುತ್ತಲಿನ ಬಡವರಿಗೆ ಪ್ರತಿ ವರ್ಷ ಕನಿಷ್ಠ ೧೦೦೦ ಉಚಿತ ನೇತ್ರ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಈ ಚಟುವಟಿಕೆಗಳಲ್ಲದೆ, ಕ್ಲಬ್ ಆರೋಗ್ಯ ಚಟುವಟಿಕೆಗಳಾದ ಸ್ಕ್ರೀನಿಂಗ್ ಶಿಬಿರಗಳು, ಆರೋಗ್ಯ ಮತ್ತು ಕಾನೂನು ಅರಿವು ಕಾರ್ಯಕ್ರಮಗಳು,ಲಯನ್ಸ್ ಕ್ಲಬ್ ನ ನುರಿತ ವೈದ್ಯರಿಂದ ಪ್ರತಿ ಮಂಗಳವಾರ ಆಕಾಶವಾಣಿಯಲ್ಲಿ ಆರೋಗ್ಯ ವಾಣಿ ಕಾರ್ಯಕ್ರಮ ಮತ್ತು ಸಮುದಾಯಕ್ಕೆ ಅಗತ್ಯವಿರುವ ಇತರ ಚಟುವಟಿಕೆಗಳನ್ನು ಸಹ ಆಯೋಜಿಸುತ್ತಿದೆ.
ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ ಕುಮಾರಿ ಸರಸ್ವತಿ ಕಿಲಕಿಲೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರು ಮಾತನಾಡಿ ಉಚಿತ ಕಾನೂನು ಸೇವೆಗಳ ಸಮಗ್ರ ಮಾಹಿತಿಯನ್ನು ನಾಲ್ಸಾದ ಸಾಕ್ಷಚಿತ್ರಗಳನ್ನು ವಿಡಿಯೋ ಮೂಲಕ ವಿವರಿಸಿದರು.
ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಯಾರು ಬೇಕಾದರೂ ಉಚಿತ ಕಾನೂನು ಸಲಹೆಗಳನ್ನು ಪಡೆದುಕೊಳ್ಳಬಹುದು. ಆದರೆ, ಉಚಿತ ಕಾನೂನು ನೆರವು ಎಲ್ಲರಿಗೂ ಸಿಗುವುದಿಲ್ಲ. ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ ೧೨ರಲ್ಲಿ ಉಲ್ಲೇಖಿಸಿರುವಂತೆ ಮಹಿಳೆಯರು ಮತ್ತು ಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಂಗವಿಕಲರು, ಕಾರ್ಮಿಕ ವರ್ಗ, ಮಾನವ ಕಳ್ಳಸಾಗಣೆಗೆ ಒಳಗಾದವರು, ಕಾರ್ಮಿಕ ವರ್ಗ, ಕಸ್ಟಡಿಯಲ್ಲಿರುವ ಆರೋಪಿ, ಪ್ರಾಕೃತಿಕ ವಿಕೋಪಕ್ಕೆ ತುತ್ತಾದವರು, ವಾರ್ಷಿಕ ೩ ಲಕ್ಷಕ್ಕೂ ಕಡಿಮೆ ಆದಾಯ ಇರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ಒದಗಿಸಲಾಗುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಪ್ರಾಧಿಕಾರದ ವತಿಯಿಂದಲೇ ವಕೀಲರನ್ನೂ ನೇಮಿಸಲಾಗುತ್ತದೆ ಎಂದು ತಿಳಿಸಿದರು.ನ್ಯಾಯ ಬಂಧು ಯ್ಯಪ್ ಮತ್ತು ನಾಲ್ಸಾ ಯ್ಯಾಪ್ ಕುರಿತು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಕ್ಲಬ್‌ನ ಕಾರ್ಯದರ್ಶಿ ಲಯನ್ ರಾಜೇಂದ್ರಕುಮಾರ ಶಿವಾಳೆ ಮಾತನಾಡಿ, ಎಸ್ ಆರ್ ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಎಲ್ಲಾ ಬಿಎಡ್ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಕಾನೂನು ಹಕ್ಕುಗಳನ್ನು ಪಡೆಯಲು ಕಾನೂನಿನ ಅರಿವು ಬಹಳ ಮುಖ್ಯ ಹಾಗೂ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಈ ಜ್ಞಾನವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಎಸ್ ಆರ್ ಕೆ ಕಾಲೇಜಿನ ಪ್ರಾಚಾರ್ಯರಾದ ಡಾ ಅರುಣಾಕುಮಾರಿ ಟಿ ಅವರು ಮಾತನಾಡಿ ಕಾನೂನು ಸೆವೆಗಳ ಪ್ರಾಧಿಕಾರದ ಉಚಿತ ಸೇವೆಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅವಶ್ಯಕತೆ ಇದ್ದು ಇದರ ಸದುಪಯೋಗ ಎಲ್ಲರೂ ಪಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಬಸವಂತರಾಯ ಪಾಟೀಲ್, ಚಂದ್ರಶೇಖರ್, ಗೋಪಾಲ, ನರಸಪ್ಪ ,ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು,ಲಯನ್ಸ್ ಕ್ಲಬ್ ಸದಸ್ಯರು, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.