ಲಮಾಣಿ ವಿಧಾನಸಭೆಯ ನೂತನ ಉಪಾಧ್ಯಕ್ಷ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೬- ವಿಧಾನಸಭೆಯ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಅವರು ಅವಿರೋಧವಾಗಿ ಆಯ್ಕೆಯಾದರು.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ನಂತರ ವಿಧಾನಸಭೆಯ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆದು, ಕಾಂಗ್ರೆಸ್‌ನ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ರುದ್ರಪ್ಪ ಲಮಾಣಿ ಅವರನ್ನು ವಿಧಾನಸಭೆಯ ನೂತನ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದಕ್ಕೂ ಮೊದಲು ವಿಧಾನಸಭೆಯ ನೂತನ ಉಪಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವರನ್ನು ಆಯ್ಕೆ ಮಾಡುವ ಪ್ರಸ್ತಾವನೆಯನ್ನುಸದನದಲ್ಲಿ ಮಂಡಿಸಲಾಯಿತು. ಸರ್ಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಪ್ರಸ್ತಾವನೆಯನ್ನು ಮಂಡಿಸಿದ್ದು, ಈ ಪ್ರಸ್ತಾವನೆಗೆ ಕಾಂಗ್ರೆಸ್ ಸದಸ್ಯ ಬಸವರಾಜ ನೀಲಣ್ಣ ಶಿವಣ್ಣನವರು ಅನುಮೋದಿಸಿದರು.
ಇದಾದ ಬಳಿಕ ಸಭಾಧ್ಯಕ್ಷ ಯು.ಟಿ. ಖಾದರ್ ರುದ್ರಪ್ಪ ಲಮಾಣಿ ಅವರನ್ನು ವಿಧಾನಸಭೆಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದ್ದು, ಸದನ ಧ್ವನಿ ಮತದಿಂದ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿತು.ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉಪಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು.ವಿಧಾನಸಭೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ರುದ್ರಪ್ಪ ಲಮಾಣಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆತಂದು ವಿಧಾನಸಭಾಧ್ಯಕ್ಷರ ಆಸನದಲ್ಲಿ ಕುಳ್ಳಿರಿಸಿದರು.ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸೇರಿದಂತೆ ಹಲವರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.
ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆ
ವಿಧಾನಸಭೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರುದ್ರಪ್ಪ ಲಮಾಣಿ ಅವರು ೧೯೯೯, ೨೦೦೪, ೨೦೧೩ ಮತ್ತು ೨೦೨೩ ಹೀಗೆ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಇವರು ಹಾವೇರಿ ಜಿಲ್ಲೆಗೆ ಸೇರಿದವರು.