
(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು19: ತಾಲೂಕಿನಲ್ಲಿ ಪ್ರಸಕ್ತ ವರ್ಷ ರೈತರು ಗೋವಿನ ಜೋಳದ ಬೆಳೆಯನ್ನು ಬೆಳೆಯಲು ಹೆಚ್ಚು ಆಸಕ್ತಿ ತೋರಿಸಿದ್ದು ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಮುಂಗಾರು ಮತ್ತು ಹಿಂಗಾರು ಬೆಳೆಯನ್ನು ಕಳೆದುಕೊಂಡು ಕಂಗಾಲಾದಾಗ ರೈತರನ್ನು ಪಾರು ಮಾಡಿದ್ದೆ ಗೋವಿನ ಜೋಳ.
ಈ ಬಾರಿ ರೈತರು ಮಳೆಯಕಣ್ಣಾ ಮುಚ್ಚಾಲೆ ಆಟದಿಂದ ಈಗಾಗಲೇ ಮುಂಗಾರಿನ ಬೆಳೆಯನ್ನು ಕಳೆದುಕೊಂಡ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿನ ಜೋಳ ಬೆಳೆಯಲು ಮುಂದಾಗಿದ್ದಾರೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಒಟ್ಟು 10,660 ಹೆಕ್ಟರ್ ಪ್ರದೇಶದಲ್ಲಿ ಗೋವಿನ ಜೋಳದ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ ಆದರೆ ಭೂಮಿಯಲ್ಲಿನ ತೇವಾಂಶದ ಕೊರತೆಯಿಂದಾಗಿ ಕೇವಲ 36 ರಿಂದ 40 ಡಿಗ್ರಿ ಎಷ್ಟು ಬಿತ್ತನೆಯಾಗಿದೆ ಎನ್ನಲಾಗಿದೆ.
ಈಗ ಗೋವಿನ ಜೋಳದ ಬೆಳೆಗೆ ಲದ್ದಿ ಹುಳದ ಕಾಟ ಆರಂಭವಾಗಿದ್ದು ಎಳೆಯ ಯಸುಳುಗಳನ್ನು ತಿನ್ನುತ್ತಿರುವುದರಿಂದ ಬೆಲೆ ಕುಂಠಿತಗೊಂಡು ಇಳುವರಿ ಕುಂಠಿತವಾಗಿದೆ ಎಂಬುದು ಕೃಷಿ ಇಲಾಖೆಯ ಅಧಿಕಾರಿಗಳ ಹೇಳಿಕೆಯಾಗಿದೆ.
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ನರ್ಸಮ್ಮನವರ್ ಜಮೀನುಗಳಿಗೆ ಭೇಟಿ ನೀಡಿ ಅವುಗಳನ್ನು ಪರಿಶೀಲಿಸಿ ರೈತರಿಗೆ ಲದ್ದಿ ಹುಳಗಳ ನಿಯಂತ್ರಣಕ್ಕಾಗಿ ಕೈಗೊಳ್ಳಬಹುದಾದ ಕ್ರಮಗಳು ಕುರಿತು ರೈತರಿಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಬಿತ್ತನೆಯಾಗಿ ಒಂದು ತಿಂಗಳ ಅವಧಿ ಇರುವ ಬೆಳೆಗೆ ರೈತರು ಎಮಾಮೆಕ್ಟೋ ಬೆಂಜೋಯೇಟ್ ಕ್ರಿಮಿನಾಶಕವನ್ನು 8 ರಿಂದ 10 ಗ್ರಾಂ 15 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ ಹೇಳಿದ್ದಾರೆ.