
ಬೆಂಗಳೂರು,ಮೇ೬: ಯಲಹಂಕ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಲೆ ಎದ್ದಿದ್ದು, ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸುವ ವಿಶ್ವಾಸ ನನಗಿದೆ ಎಂದು ಬಿಜೆಪಿ ಅಭ್ಯರ್ಥಿ ಎಸ್,ಆರ್ ವಿಶ್ವನಾಥ್ ಹೇಳಿದ್ದಾರೆ.
ಅವರು ಇಂದು ಗುಣಿ ಅಗ್ರಹಾರ, ಕಾಳತಮ್ಮನಹಳ್ಳಿ, ಕಸಘಟ್ಟಪುರ, ಕುಂಬಾರಹಳ್ಳಿ, ಸೋಲದೇವನಹಳ್ಳಿ, ಸಾಸಿವೆ ಘಟ್ಟ, ತರಬನಹಳ್ಳಿ, ಬಿಳಿಹಾಜಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.
ರೋಡ್ ಶೋ ವೇಳೆ ಕುಂಬಾರ ಹಳ್ಳಿಯ ಹಲವಾರು ಕ್ರಿಶ್ಚಿಯನ್ ಸಮುದಾಯದ ಹಲವು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ವಿಶ್ವನಾಥ್ ಅವರಿಗೆ ಬೆಂಬಲ ಸೂಚಿಸಿ ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ತನ್ನನ್ನು ತಾನೇ ಅಪಹರಣ ಮಾಡಿಕೊಂಡು ಆರೋಪವನ್ನು ನನ್ನ ಮೇಲೆ ಹಾಕುವುದು, ಸಿಂಗನಾಯಕನಹಳ್ಳಿಗೆ ಪ್ರಚಾರಕ್ಕೆಂದು ಪತ್ನಿಯನ್ನು ಕಳುಹಿಸಿ ಅವರ ಮೇಲೆ ಜೆಡಿಎಸ್ ಕಾರ್ಯಕರ್ತರಿಂದಲೇ ಹಲ್ಲೆ ನಡೆಸಿ ಅದರ ಆರೋಪವನ್ನು ನನ್ನ ಮೇಲೆ ಹಾಕಲು ಪಿತೂರಿ ನಡೆಸಿದ್ದರು. ಆದರೆ, ಅಂತಹ ಪಿತೂರಿ ನಡೆಯುವ ಮುನ್ನವೇ ಬಹಿರಂಗವಾಗಿದ್ದರಿಂದ ಮತದಾರರು ಆ ವ್ಯಕ್ತಿಯ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದರು.
ಮತದಾರರ ಬಳಿಗೆ ಹೋಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡುವುದನ್ನು ಬಿಟ್ಟು ಇಂತಹ ಅಕ್ಷಮ್ಯ, ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಕಿಡಿ ಕಾರಿದರು.
ಪ್ರತಿಪಕ್ಷಗಳ ಅಭ್ಯರ್ಥಿಗಳು ನನ್ನ ವಿರುದ್ಧ ಯಾವುದೇ ಪಿತೂರಿಗಳನ್ನು ನಡೆಸಿದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ನಾನು ಕ್ಷೇತ್ರದಲ್ಲೆಡೆ ಸುತ್ತಾಡಿ ನಮ್ಮ ಬಿಜೆಪಿ ಸರ್ಕಾರ ಮತ್ತು ನಾನು ಕ್ಷೇತ್ರದ ಅಭಿವೃದ್ಧಿಗೆ ಮಾಡಿರುವ ಕೆಲಸಗಳನ್ನು ಮುಂದಿಟ್ಟು ಮತಯಾಚನೆ ಮಾಡುತ್ತಿದ್ದೇನೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಯಲಹಂಕ ಕ್ಷೇತ್ರ ವ್ಯಾಪ್ತಿಯ ನಿವಾಸಿಗಳಲ್ಲ. ಅವರಿಗೆ ಕ್ಷೇತ್ರದ ಅಭಿವೃದ್ಧಿ ಮತ್ತು ಸಮಸ್ಯೆಗಳ ಪರಿಚಯವಿಲ್ಲ. ಚುನಾವಣೆ ಬಂದಾಗ ಮಾತ್ರ ಕ್ಷೇತ್ರಕ್ಕೆ ಕಾಲಿಟ್ಟು ನಂತರ ಕಾಲ್ಕೀಳುತ್ತಾರೆ. ಹೀಗೆ ಚುನಾವಣೆಗೋಸ್ಕರ ಬಂದು ಹೋಗುವ ವ್ಯಕ್ತಿಗಳನ್ನು ಧಿಕ್ಕರಿಸಿ ಕ್ಷೇತ್ರದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ನನ್ನನ್ನು ಅತಿ ಹೆಚ್ಚು ಮತಗಳ ಅಂತರದಿಂದ ಜಯಶಾಲಿಯನ್ನಾಗಿ ಮಾಡಬೇಕೆಂದು ವಿಶ್ವನಾಥ್ ಮತದಾರರಲ್ಲಿ ಮನವಿ ಮಾಡಿದರು.
ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಸ್.ಆರ್. ವಿಶ್ವನಾಥ್ ಇಂದು ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದ್ದು, ಈ ಸಂದರ್ಭದಲ್ಲಿ ಮತದಾರರು ಹಾರ ಹಾಕಿ ಅವರನ್ನು ಸ್ವಾಗತಿಸಿದರು.