ಲಕ್ಷ ಗಡಿಯತ್ತ ಸೋಂಕು ಹೆಚ್ಚಿದ ಆತಂಕ

ನವದೆಹಲಿ, ಏ.೪- ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅಂಕೆಗೆ ಸಿಗದಂತೆ ನಾಗಾಲೋಟದಲ್ಲಿ ಸಾಗುತ್ತಿದೆ. ನಿತ್ಯ ಸೋಂಕು ಏರಿಕೆ ದೇಶದ ಜನರನ್ನು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.
೭ ತಿಂಗಳ ಬಳಿಕ ದೇಶದಲ್ಲಿ ಸರಿಸುಮಾರು ೯೩ ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದೇ ವೇಗದಲ್ಲಿ ಸಾಗಿದರೆ ಕೆಲವೇ ದಿನಗಳಲ್ಲಿ ಸೋಂಕು ೧ ಲಕ್ಷ ಗಡಿಯತ್ತ ದಾಟಿದರೂ ಅಶ್ಚರ್ಯವಿಲ್ಲ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೯೩,೨೪೯ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ೫೧೩ ಮಂದಿ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ ೬೦,೦೪೮ ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಬೆಳಿಗ್ಗೆ ೮ ಗಂಟೆಯ ತನಕ ಹೊಸದಾಗಿ ದಾಖಲಾಗಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ ೧,೨೪,೮೫,೫೦೯ ಮಂದಿಗೆ ಏರಿಕೆಯಾಗಿದೆ. ಇಲ್ಲಿಯವರೆಗೆ ಚೇತರಿಸಿಕೊಂಡವರ ಸಂಖ್ಯೆ ೧.೧೬,೨೯.೨೮೯ಕ್ಕೆ ಏರಿಕೆಯಾಗಿದೆ. ೧,೬೪,೬೨೩ ಮಂದಿ ಇಲ್ಲಿಯ ತನಕ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್, ಹರಿಯಾಣ, ಚಂಡಿಘಡ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಗುಜರಾಜ್ ಮತ್ತು ಛತ್ತೀಸ್‌ಗಡ ಸೇರಿದಂತೆ, ದೇಶದ ಇತರೆ ರಾಜ್ಯಗಳಲ್ಲಿ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿದೆ. ಅದರಲ್ಲಿಯೂ ಮಹಾರಾಷ್ಟ್ರ ಒಂದರಲ್ಲಿ ದಿನದಿಂದ ದಿನಕ್ಕೆ ದಾಖಲಾಗುತ್ತಿರುವ ಸೋಂಕು ಸಂಖ್ಯೆ ಮಹಾರಾಷ್ಟ್ರ ಸರ್ಕಾರವನ್ನು ಬೆಚ್ಚಿ ಬೀಳಿಸಿದೆ.
ದೇಶದ ೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಜೊತೆಗೆ ಇನ್ನಿತರೆ ರಾಜ್ಯಗಳಿಗೂ ಸೋಂಕು ದಿನದಿಂದ ದಿನಕ್ಕೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಗಾಲೋಟದಲ್ಲಿ ಸಾಗುತ್ತಿದೆ.
ಗಣನೀಯ ಏರಿಕೆ:
ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ರಾಕೆಟ್ ವೇಗ ಪಡೆದುಕೊಂಡಿದೆ.
ದೇಶದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಒಟ್ಟಾರೆ ಸಾವು ಮತ್ತು ಸೋಂಕಿನ ಪೈಕಿ ಮಹಾರಾಷ್ಟ್ರದಲ್ಲಿ ದಾಖಲೆ ಬರೆದಿದೆ. ಅಷ್ಟೆಅಲ್ಲ ಒಟ್ಟಾರೆ ಸೋಂಕು ಮತ್ತು ಸಕ್ರಿಯ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲು ಇದೆ.
ಸದ್ಯ ದೇಶದಲ್ಲಿ ೬,೯೧,೫೯೭ ಮಂದಿಗೆ ಸಕ್ರಿಯ ಪ್ರಕರಣ ಏರಿಕೆಯಾಗಿದೆ. ಕಳೆದ ಫೆಬ್ರವರಿ ಮಧ್ಯಭಾಗದಿಂದ ಇಲ್ಲಿಯವರೆಗೆ ೫.೫ ಲಕ್ಷಕ್ಕೂ ಅಧಿಕ ಮಂದಿಗೆ ಸಕ್ರಿಯ ಪ್ರಕರಣಗಳು ಏರಿಕೆಯಾಗಿವೆ.

೭.೫೯ ಕೋಟಿಗೆ ಲಸಿಕೆ
ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ನಿತ್ಯ ಏರಿಕೆಯಾಗುತ್ತಿದೆ. ಈ ನಡುವೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಪ್ರಮಾಣವನ್ನೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚು ಮಾಡಿದೆ.
ಸದ್ಯ ದೇಶದಲ್ಲಿ ಇದುವರೆಗೆ ೭,೫೯,೭೯,೬೫೧ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಮತ್ತಷ್ಟು ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.