ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷಗಾದಿಗೆ ನಾಳೆ ಚುನಾವಣೆ


ಲಕ್ಷ್ಮೇಶ್ವರ,ನ.3- ಇಲ್ಲಿನ ಪುರಸಭೆಗೆ ಚುನಾವಣೆ ನಡೆದು 23 ತಿಂಗಳು ಕಳೆದಿದ್ದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯದ ಕಾರಣ ಸದಸ್ಯರಿಗೆ ಅಧಿಕಾರ ಕನಸಾಗಿತ್ತು. ಆದರೆ ನವೆಂಬರ್ 4ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ
23 ಸದಸ್ಯ ಬಲದ ಪುರಸಭೆಯಲ್ಲಿ 9ರಲ್ಲಿ ಕಾಂಗ್ರೆಸ್, 7 ಸ್ಥಾನಗಳಲ್ಲಿ ಬಿಜೆಪಿ, ಇಬ್ಬರು ಜೆಡಿಎಸ್ ಮತ್ತು ಐದು ಜನ ಸದಸ್ಯರು ಪಕ್ಷೇತರರಾಗಿ ಆಯ್ಕೆ ಆಗಿದ್ದಾರೆ. ಬಹುಮತಕ್ಕೆ 12 ಸದಸ್ಯರ ಅಗತ್ಯ ಇದೆ. ಆದರೆ ಎರಡೂ ಪಕ್ಷಗಳಿಗೆ ಪೂರ್ಣ ಬಹುಮತ ಇಲ್ಲ. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ.
9 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಇಬ್ಬರು ಪಕ್ಷೇತರರ ಬೆಂಬಲ ಪಡೆದರೆ 11 ಆಗಿ ಬಹುಮತಕ್ಕೆ ಓರ್ವ ಸದಸ್ಯರ ಬೆಂಬಲ ಬೇಕಾಗುತ್ತದೆ. ಇನ್ನು 7 ಸದಸ್ಯರು ಇರುವ ಬಿಜೆಪಿ ಇಬ್ಬರು ಪಕ್ಷೇತರರ ಬೆಂಬಲ ಮತ್ತು ಸಂಸದ ಹಾಗೂ ಶಾಸಕರ ಒಂದೊಂದು ಮತ ಪರಿಗಣಿಸಿದರೂ ಬಲ 11 ಆಗುತ್ತದೆ. ಹೀಗಾಗಿ ಯಾರು ಜೆಡಿಎಸ್ ಮತ್ತು ಓರ್ವ ಪಕ್ಷೇತರ ಸದಸ್ಯರ ಬೆಂಬಲ ಗಳಿಸುವಲ್ಲಿ ಯಶಸ್ವಿ ಆಗುತ್ತಾರೋ ಆ ಪಕ್ಷದವರು ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಇದೆ.
ಆಡಳಿತಾರೂಢ ಬಿಜೆಪಿಗೆ ಅಧಿಕಾರ ಪ್ರತಿಷ್ಠೆಯಾಗಿದೆ. ಸಧ್ಯ ಬಿಜೆಪಿ ಆಡಳಿತ ಇದ್ದು ಸ್ಥಳೀಯವಾಗಿ ಬಿಜೆಪಿಯವರೇ ಶಾಸಕರು ಇರುವುದರಿಂದ ಅಧಿಕಾರಕ್ಕಾಗಿ ಅವರು ತಂತ್ರಗಳನ್ನು ಬಳಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪೂರ್ಣಿಮಾ ಪಾಟೀಲ, ಅಶ್ವಿನಿ ಅಂಕಲಕೋಟಿ ಮತ್ತು ನೀಲಪ್ಪ ಮೆಣಸಿನಕಾಯಿ ಅಕಾಂಕ್ಷಿಗಳು ಆಗಿದ್ದಾರೆ. ಇಲ್ಲ್ಲಿ ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮತ್ತು ಮುಖಂಡರು ತೆಗೆದುಕೊಳ್ಳುವ ನಿರ್ಧಾರ ಅಂತಿಮ.
ಇನ್ನು ಪಕ್ಷೇತರರಾಗಿ ಆಯ್ಕೆ ಆಗಿ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಜಯಕ್ಕ ಅಂದಲಗಿ ಕಾಂಗ್ರೆಸ್‍ನಿಂದ ಪ್ರಮುಖ ಅಕಾಂಕ್ಷಿ. ಆದರೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಆಗಿರುವುದರಿಂದ ಜಯಕ್ಕ ಕಳ್ಳಿ ಅವರೂ ಸಹ ಅಧಿಕಾರಕ್ಕಾಗಿ ನಾಯಕರ ಮುಂದೆ ಹಕ್ಕು ಮಂಡಿಸುವುದನ್ನು ಅಲ್ಲಗಳೆಯುವಂತಿಲ್ಲ.
ಕಾಂಗ್ರೆಸ್‍ನಲ್ಲಿ ಮಾಜಿ ಮಾಜಿ ಜಿ.ಎಸ್. ಗಡ್ಡದೇವರಮಠ, ಎಸ್.ಎನ್. ಪಾಟೀಲ, ರಾಮಕೃಷ್ಣ ದೊಡ್ಡಮನಿ ಹಾಗೂ ಮುಖಂಡರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಯಾರು ಏನೇ ಕಸರತ್ತು ಮಾಡಿದರೂ ಓರ್ವ ಪಕ್ಷೇತರ ಮತ್ತು ಜೆಡಿಎಸ್‍ನ ಇಬ್ಬರು ಸದಸ್ಯರ ಬೆಂಬಲ ನಿರ್ಣಾಯಕ ಆಗಲಿದೆ. ಜೆಡಿಎಸ್ ಸದಸ್ಯರು ಬಸವರಾಜ ಹೊರಟ್ಟಿ ಮತ್ತು ಕೋನರೆಡ್ಡಿ ಅವರ ಮಾರ್ಗದರ್ಶನದಂತೆ ನಡೆಯಬಹುದು.
ಉಪಾಧ್ಯಕ್ಷ ಸ್ಥಾನ ಎಸ್‍ಸಿಗೆ ಮೀಸಲು ಆಗಿದ್ದು ಕಾಂಗ್ರೆಸ್‍ನಲ್ಲಿ ಇಬ್ಬರು ಮತ್ತು ಬಿಜೆಪಿಯಲ್ಲಿ ಒಬ್ಬರು ಇದ್ದು ಚುನಾವಣೆ ನಡೆದರೆ ಅದೂ ಗೊಂದಲದ ಗೂಡಾಗುವ ಸಾಧ್ಯತೆ ಇದೆ.
ಹಿಂದಿನ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ ಮತ್ತು ಜಿ.ಎಸ್. ಗಡ್ಡದೇವರಮಠರು ರಾಜೀ ಸಂಧಾನ ಮಾಡಿದ್ದರಿಂದ ಎರಡೂ ಪಕ್ಷಗಳ ಸದಸ್ಯರಿಗೆ ಅವಧಿ ಹಂಚಿಕೆ ಆಗಿ ಬಹುಮತದ ಪ್ರಶ್ನೆ ಉದ್ಭವಿಸಿರಲಿಲ್ಲ. ಈಗಲೂ ಆ ರೀತಿ ಆದರೆ ಸಮಸ್ಯೆ ಇಲ್ಲ. ಆದರೆ ಚುನಾವಣೆ ನಡೆದರೆ ಮಾತ್ರ ಬಹುಮತಕ್ಕಾಗಿ ರಾಜಕೀಯ ಚದುರಂಗದಾಟಗಳು ನಡೆಯುವ ಲಕ್ಷಣಗಳು ಇವೆ.