ಲಕ್ಷ್ಮೇಶ್ವರ: ಧರ್ಮ ಜಾಗೃತಿ ಸಮಾರಂಭ

ಲಕ್ಷ್ಮೇಶ್ವರ,ಮಾ11: ಭೌತಿಕ ಬದುಕಿಗೆ ಸಂಪತ್ತಿನೊಂದಿಗೆ ಶಿವಜ್ಞಾನದ ಅರಿವು ಮುಖ್ಯ. ಸಂಸ್ಕಾರ ಮತ್ತು ಸಂಸ್ಕøತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸತ್ಫಲಗಳನ್ನು ಪಡೆಯಬೇಕು. ಜ್ಞಾನ ಕ್ರಿಯಾತ್ಮಕವಾದ ಧರ್ಮ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಶ್ರೀಮದ್ರಂಭಾಪುರಿ ಶಾಖಾ ಶ್ರೀ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜನ ಸಮುದಾಯದಲ್ಲಿ ತಾಳ್ಮೆ ಮತ್ತು ಸಹನೆಯ ಗುಣ ಇಲ್ಲದಿರುವುದೇ ಇಂದಿನ ಅಶಾಂತಿ ಅತೃಪ್ತಿಗಳಿಗೆ ಮೂಲ ಕಾರಣ. ಹಣತೆ ತನಗಾಗಿ ಉರಿಯದೇ ಪರರಿಗೆ ಬೆಳಕು ನೀಡುವಂತೆ ಮಹಾತ್ಮರು ತಮಗಾಗಿ ಏನನ್ನೂ ಬಯಸದೇ ಪರ ಹಿತಕ್ಕಾಗಿ ಸದಾ ಶ್ರಮಿಸುತ್ತಾರೆ. ನೆರಳು ನೀಡುವ ಮರ, ಹರಿಯುವ ನೀರು, ಬೀಸುವ ಗಾಳಿ ಮತ್ತು ನಮ್ಮೆಲ್ಲರನ್ನು ಹೊತ್ತ ನೆಲ ಪರೋಪಕಾರವನ್ನು ಎತ್ತಿ ತೋರಿಸುತ್ತವೆ. ನದಿಯ ನೀರನ್ನು ಎಷ್ಟು ತುಂಬಿದರೂ ಕಡಿಮೆ ಹೇಗೆ ಆಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಪೂರ್ಣವಾಗದು. ಜಾತಿ ಮತ್ತು ಮತೀಯ ಮೌಢ್ಯ ಅಳೆದು ಸ್ನೇಹ ಸೌಜನ್ಯ ಉಳಿದು ಬೆಳೆಯಬೇಕು. ಹಣ ಮತ್ತು ಅಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ದೇಶ ಸಂಸ್ಕøತಿ ಮತ್ತು ಧರ್ಮದ ಬಗೆಗೆ ಚಿಂತಿಸಲಾರ. ಸಿರಿ ಸಂಪತ್ತು ಗಳಿಸಲು ಉಳಿಸಲು ಮತ್ತು ಕುಡಿಯಲು ಸೇದಲು ಬೇಕಾದಷ್ಟು ಸಮಯವಿದೆ. ಆದರೆ ಆಧ್ಯಾತ್ಮ ಸಾಧನೆಗೆ ಮತ್ತು ಭಗವಂತನ ಸ್ಮರಣೆಗೆ ಮಾತ್ರ ಸಮಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರುವುದು ನೋವಿನ ಸಂಗತಿ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಮೌಲ್ಯಾಧಾರಿತ ವಿಚಾರಗಳನ್ನು ಅನುಸರಿಸಿ ಬಾಳಬೇಕಾಗುತ್ತದೆ. ತನಗಾಗಿ ಬಯಸುವುದು ಜೀವಗುಣ. ಎಲ್ಲರಿಗಾಗಿ ಬಯಸುವುದು ದೇವಗುಣ. ಅಂಥ ದೇವಗುಣಗಳ ಅಕ್ಷಯ ನಿಧಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಎಂಬುದನ್ನು ಯಾರೂ ಮರೆಯಬಾರದೆಂದರು.

ಅಧ್ಯಕ್ಷತೆ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ಸಮಾರಂಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್.ಗಡ್ಡದ್ದೇವರಮಠ, ಗಂಗಣ್ಣ ಮಹಂತಶೆಟ್ರ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಪಲ್ಲಕ್ಕಿ ಉತ್ಸವ, ಧರ್ಮ ರಥೋತ್ಸವ ಹಾಗೂ ಕಡುಬಿನ ಕಾಳಗ ನೆರವೇರಿಸಲಾಯಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.