ಲಕ್ಷ್ಮೇಶ್ವರದಲ್ಲಿ ಕಾಂಗ್ರೆಸ್ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು.13: ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು. ಇಲ್ಲಿನ ಮಹಾತ್ಮಾ ಗಾಂಧಿ ವರ್ತುಲದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಬೆಳಿಗ್ಗೆಯಿಂದ ಸಂಜೆಯವರೆಗೂ ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ ಮಾತನಾಡಿ ‘ಜೋಡೋ ಭಾರತ ಯಾತ್ರೆಯಿಂದ ರಾಹುಲ್ ಗಾಂಧಿಯವರ ಹೆಸರು ಮುಂಚೂಣಿಗೆ ಬಂದಿದೆ. ಇದನ್ನು ಬಿಜೆಪಿಯಿಂದ ಸಹಿಸಲು ಆಗುತ್ತಿಲ್ಲ. ಹೀಗಾಗಿ ವಿನಾಕಾರಣ ಅವರ ಸದಸ್ಯತ್ವವನ್ನು ರದ್ದು ಪಡಿಸಲು ಷಡ್ಯಂತರ ನಡೆಸುತ್ತಿದ್ದಾರೆ. ಆದರೆ ನ್ಯಾಯದ ಪರವಾಗಿ ಹೋರಾಡುವ ರಾಹುಲ್ ಗಾಂಧಿ ಅವರಿಗೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ. ಬಿಜೆಪಿ ಏನೇ ಮಾಡಿದರೂ ಕಾಂಗ್ರೆಸ್‍ನ ಬೆಳವಣಿಗೆಯನ್ನು ತಡೆಯಲು ಸಾಧ್ಯ ಇಲ್ಲ’ ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ನಗರ ಘಟಕದ ಅಧ್ಯಕ್ಷ ಅಂಬರೀಶ ತೆಂಬದಮನಿ, ರಾಮಣ್ಣ ಲಮಾಣಿ ಶಿಗ್ಲಿ, ಸರ್ಪರಾಜ್ ಸೂರಣಗಿ, ಸಾಯಿಬ್‍ಜಾನ್ ಹವಾಲ್ದಾರ, ರಾಜಣ್ಣ ಹುಲಗೂರ, ಕಿರಣ ನವಲೆ, ಮಹೇಶ ಲಮಾಣಿ, ಪರಮೇಶ್ವರ ಲಮಾಣಿ, ರಾಜಣ್ಣ ಕುಂಬಿ, ಶೇಕಪ್ಪ ಲಮಾಣಿ, ನೀಲಪ್ಪ ಶೆರಸೂರಿ, ಮಂಜಪ್ಪ ಶೆರಸೂರಿ, ಈರಣ್ಣ ಅಂಕಲಕೋಟಿ, ಮಾನಪ್ಪ ಲಮಾಣಿ ಇದ್ದರು.